ವಿಜಯಪುರ, ಎ.12 (Daijiworld News/MB) : ಜಗತ್ತಲ್ಲೇ ಭೀರಿ ಸೃಷ್ಟಿಸಿರುವ ಕೊರೊನಾ ವೈರಸ್ ವಿಜಯಪುರಕ್ಕೂ ಕಾಲಿಟ್ಟಿದ್ದು ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದೆ.
ಭಾನುವಾರ ನಗರದ ಚಪ್ಪರಬಂದ ಪ್ರದೇಶದ 60 ವರ್ಷದ ವೃದ್ಧೆಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ಅವರು ಸುಮಾರು 25 ಜನರ ಅವಿಭಕ್ತ ಕುಟುಂಬದಲ್ಲಿ ವಾಸವಿದ್ದವರಾಗಿದ್ದಾರೆ.
ಈ ವೃದ್ಧೆಗೆ ಸೋಂಕು ಇರುವುದು ಖಚಿವಾಗುವ ಮುನ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು, ನಂತರ ನಗರದ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ.
ಸೋಂಕಿತ ವೃದ್ಧೆಯ ಕುಟುಂಬದ 25 ಸದಸ್ಯರನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ವಿಶೇಷ ಆಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿದೆ.
ಹಾಗೆಯೇ ಸೋಂಕಿತ ಮಹಿಳೆಯ ಪ್ರವಾಸ ಹಾಗೂ ಸಂಪರ್ಕದ ಹಿನ್ನಲೆಯ ಬಗ್ಗೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದೆ.
ರಾಜ್ಯದಲ್ಲಿ ಇಂದು ಒಟ್ಟು 11 ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ.