ವಿಜಯಪುರ, ಎ.12 (Daijiworld News/MB) : ನಗರದಲ್ಲಿ ಕೊರೊನಾ ಶಂಕಿತರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಡಿಕಮಾನ್ ದಿಂದ ಗೋಲಗುಮ್ಮಟ ದವರೆಗೆ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಛಪ್ಪರಬಂದ್ ಗಲ್ಲಿ ಸೇರಿ ಈ ಪ್ರದೇಶದ ಎಲ್ಲ ಗಲ್ಲಿಗಳ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.ಹೀಗಾಗಿ ಜನರು ಜಿಲ್ಲಾಡಳಿತದ ಜೊತೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಶನಿವಾರ ಸಂಜೆಯಿಂದ ಅವರು ನಗರದಲ್ಲೇ ಇದ್ದು ಜಿಲ್ಲಾಡಳಿತ ಅಧಿಕಾರಿಗಳಿಂದ ಜಿಲ್ಲೆಯ ಕೊರೊನಾ ಕುರಿತಾದ ಮಾಹಿತಿಗಳನ್ನು ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಲಾಕ್ ಡೌನ್ ಹಾಗೂ ಸೀಲ್ ಡೌನ್ ಇರುವ ಪ್ರದೇಶದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಅದೆಲ್ಲೂ ಮುಖ್ಯವಾಗಿ ಸೀಲ್ ಡೌನ್ ಇರುವ ಪ್ರದೇಶಕ್ಕೆ ಹೊರಗಿನ ಯಾರಿಗೂ ಪ್ರವೇಶವಿಲ್ಲ. ಈ ಪ್ರದೇಶದ ಜನರೂ ಹೊರಗಡೆ ಬರುವಂತೆ ಇಲ್ಲ. ಜಿಲ್ಲಾಡಳಿತದ ಈ ಕಟ್ಟುನಿಟ್ಟಿನ ಸೂಚನೆಯನ್ನು ಯಾರೂ ಉಲ್ಲಂಘಿಸಬಾರದು.ನಗರದಲ್ಲಿ ಯಾರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡಬಾರದು ಎಂದು ಸೂಚಿಸಿದರು.
ಮನೆಯಲ್ಲಿರಿ ಸುರಕ್ಷಿತವಾಗಿರಿ. ಬದುಕಿ, ಬದುಕಲು ಬಿಡಿ, ಜೀವ ಅತ್ಯಮೂಲ್ಯವಾದದ್ದು. ಹೀಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.