ಬೆಂಗಳೂರು, ಎ.12 (DaijiworldNews/PY) : ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಈಗಾಗಲೇ ಅನೇಕ ದೇಶಗಳು ಕೊರೊನಾ ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ಮೂರು ತಿಂಗಳ ಬಾಡಿಗೆಯನ್ನು ದೆಹಲಿ ಸರ್ಕಾರ ತಾವೇ ಕೊಡುವ ಯೋಜನೆಯನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಮತ್ತು ಇಲ್ಲಿ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನೆ ಆರ್ಥಿಕ ಸ್ಥಿತ ನಾಜೂಕಾಗಿದೆ. ಇಂತಹ ವೇಳೆಯಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರ ತೋರಲಿ. ಸರ್ಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ಆರ್ಥಿಕ ಚಟುವಟಿಕೆಯೇ ಸಮಗ್ರವಾಗಿ ಸ್ಥಗಿತಗೊಂಡ ಈ ಸಮಯದಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕೆಂದು ಮನೆ ಮಾಲೀಕರು ಪಟ್ಟು ಹಿಡಿದರೆ ಆರ್ಥಿಕ ಹೊರೆಯನ್ನು ತಾಳಲಾರದೆ ಬಾಡಿಗೆದಾರ ಇನ್ನೊಂದು ಮನೆ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇಲ್ಲವಾದ್ದರಿಂದ, ಈ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು ಎಂದರು.