ಶಿವಮೊಗ್ಗ, ಎ.12 (DaijiworldNews/PY) : ವೈದ್ಯರು, ನರ್ಸ್ ಹಾಗೂ ಪೊಲೀಸರು ಕೊರೊನಾ ವಿರುದ್ದ ಹಗಲಿರುಳು ಎನ್ನದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡಲಾಗುತ್ತಿದೆ.
ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಪೊಲೀಸರಿಗೆ ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ನ ಮಾಲೀಕರು ಉಚಿತ ಪೆಟ್ರೋಲ್ ವಿತರಣೆ ಮಾಡುತ್ತಿದ್ದಾರೆ.
ತಲಾ 1 ಲೀಟರ್ ಪೆಟ್ರೋಲ್ಅನ್ನು ಪ್ರತಿಯೊಬ್ಬರ ದ್ವಿ-ಚಕ್ರ ವಾಹನಕ್ಕೆ ಅವರವರ ಇಲಾಖೆಯ ಗುರುತಿನ ಚೀಟಿ ನೋಡಿ ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂಲಕ ಪೆಟ್ರೋಲ್ ಬಂಕ್ನ ಮಾಲೀಕರು ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಮತ್ತು ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ, ಪೌರ ಕಾರ್ಮಿಕರು, ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಹೋಂಗಾರ್ಡ್ ಗಳಿಗೆ ಮುಂದಿನ ದಿನಗಳಲ್ಲಿ ಉಚಿತ ಪೆಟ್ರೋಲ್ ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಇದೇ ರೀತಿ ಉಚಿತ ಪೆಟ್ರೋಲ್ ವಿತರಣೆ ಮಾಡಲು ರಾಜ್ಯದ ಇತರೆ ಪೆಟ್ರೋಲ್ ಬಂಕ್ ಮಾಲೀಕರು ಸಹ ಮುಂದಾಗಿ, ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರಾದ ಸುಹಾಸ್ ಮನವಿ ಮಾಡಿದ್ದಾರೆ.