ಶ್ರೀನಗರ, ಎ.12 (DaijiworldNews/PY) : ಭಾರತೀಯ ಭದ್ರತಾ ಪಡೆಗಳು ಉಗ್ರರು ಮತ್ತು ಪಾಕ್ ನೆಲದಲ್ಲಿನ ಉಗ್ರ ಶಿಬಿರಗಳ ಮೇಲೆ ಗಡಿಯಲ್ಲಿ ಉಗ್ರರ ವಿರುದ್ಧದ ಆಪರೇಷನ್ ರಂಡೋರಿ ಬೆಹಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಿಶೇಷ ಪಡೆಯ ಐವರು ಕಮಾಂಡೋಗಳನ್ನು ಹತ್ಯೆ ಮಾಡಿದ್ದ ಪಾಕಿಸ್ತಾನಿ ಉಗ್ರರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆಗೆ ಸನಿಹದಲ್ಲಿದ್ದ ಪಾಕ್ ಆಕ್ರಮಿತ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಿ ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದೆ.
ಪಾಕ್ ಸೈನ್ಯವು, ಕಮಾಂಡೋಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆಯನ್ನು ಶುಕ್ರವಾರ ರಾತ್ರಿ ಕೆಣಕಿದ್ದು, ಚೆಕ್ಪೋಸ್ಟ್ಗಳ ಕಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿದ ಸೇನೆಯು ವಾಯುದಾಳಿ ನಡೆಸಿ, ಎಲ್ಒಸಿ ಬದಿಯ ಉಗ್ರರ ಅಡಗುದಾಣಗಳನ್ನು ದ್ವಂಸಗೊಳಿಸಿದೆ.
ಭಾರತೀಯ ಸೇನೆಯು, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಉಗ್ರ ನೆಲೆಗಳು ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಕೃಷ್ಣಗಂಗಾ ನದಿ ತಟದ ದೂಧ್ ನಿಯಾಲ್ ಪ್ರದೇಶವನ್ನು ಗುರಿಮಾಡಿಕೊಂಡಿತ್ತು. ಎಪ್ರಿಲ್ 5ರಂದು ಈ ಪಟ್ಟಣದಲ್ಲಿರುವ ಕೇರನ್ ಸೆಕ್ಟರ್ ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಸೇನೆಯ ವಿಶೇಷ ಕಮಾಂಡೋ ದಳಗಳು ಐವರು ಉಗ್ರಗಾಮಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.
ಪಾಕ್ ಸೇನೆ ಭಾರತದ ಕಡೆಯಿಂದ ನಡೆದಿರುವ ಸೇನಾ ದಾಳಿಯನ್ನು ಖಚಿತಪಡಿಸಿದೆ. ಭಾರತೀಯ ಸೇನೆಯು ಗಡಿನಿಯಂತ್ರಣ ರೇಖೆಯುದ್ದಕ್ಕೂ ಶಾರ್ದಾ, ದೂಧ್ ನಿಯಾಲ್ ಹಾಗೂ ಶಾಹ್ ಕೋಟ್ ಸೆಕ್ಟರ್ ಗಳಲ್ಲಿ ಫೈರಿಂಗ್ ನಡೆಸಿದೆ ಹಾಗೂ 15 ವರ್ಷದ ಬಾಲಕಿಯೂ ಸೇರಿದಂತೆ ಈ ದಾಳಿಯಲ್ಲಿ ನಾಲ್ಕು ಜನ ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ.
2020ರಲ್ಲಿ ಭಾರತ ಇಲ್ಲಿಯವರೆಗೆ 708 ಸಲ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ತಿಳಿಸಿದೆ.
ಗಡಿನಿಯಂತ್ರಣ ರೇಖೆಯ ಬಳಿ ಲಷ್ಕರ್, ಜೈಶ್ ಹಾಗೂ ಹಿಜ್ಬುಲ್ ಉಗ್ರ ಸಂಘಟನೆಗಳಿಗೆ ಸೇರಿದ್ದ ಸುಮಾರು 160 ಉಗ್ರರು ಭಾರತದೊಳಕ್ಕೆ ನುಸುಳಲು ಸನ್ನದ್ಧರಾಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಈ ದಾಳಿ ನಡೆಸದೇ ವಿಧಿಯಿರಲಿಲ್ಲ ಎಂದು ಗುಪ್ತಚರ ಮೂಲಗಳ ಮಾಹಿತಿ ತಿಳಿಸಿದೆ.