ನವದೆಹಲಿ, ಎ.13 (Daijiworld News/MB) : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 900 ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು 31 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,447ಕ್ಕೆ ಏರಿಕೆಯಾಗಿದ್ದು ಈವರೆಗೆ 716 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ಶೇ 20ರಷ್ಟು ಮಂದಿಗೆ ಮಾತ್ರ ಅತಿ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಸೋಂಕಿತರ ಸಂಖ್ಯೆಯು ವಿಪರೀತವಾಗಿ ಏರಿಕೆಯಾದರೂ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯಕ್ಕಿಂತ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾರ್ ಭಾನುವಾರ ತಿಳಿಸಿದರು.
ಸಚಿವಾಲಯವು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ಕೊರೊನಾ ಸೋಂಕು ಪರೀಕ್ಷಾ ವ್ಯವಸ್ಥೆಯನ್ನು ವಿಸ್ತರಿಸಲು ಮುಂದಾಗಿದೆ. ಪರೀಕ್ಷಾ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ. ಸೋಂಕು ಪರೀಕ್ಷೆಗೆ ಸಂಬಂಧಿಸಿದಂತೆ ಏಮ್ಸ್, ನಿಮ್ಹಾನ್ಸ್ ಸೇರಿದಂತೆ 14 ಸಂಸ್ಥೆಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾರ್ಗದರ್ಶನ ನೀಡಲಿವೆ ಎಂದು ಹೇಳಿದರು.
ಪ್ರಸ್ತುತ ಕೊರೊನಾ ರೋಗಿಗಳಿಗೆ ಒಟ್ಟು 1,671 ಹಾಸಿಗೆಗಳ ಅಗತ್ಯವಿದೆ ಆದರೆ ನಾವು 1.05 ಲಕ್ಷ ಹಾಸಿಗೆಗಳನ್ನು ಸಿದ್ಧವಾಗಿಟ್ಟು ಕೊಂಡಿದ್ದೇವೆ. 20,000 ರೈಲು ಬೋಗಿಗಳನ್ನು ಐಸೊಲೇಶನ್ ವಾರ್ಡ್ಗಳಾಗಿ ಪರಿವರ್ತಿಸಲಾಗುತ್ತಿದ್ದು ಆ ಪೈಕಿ 5,000 ಬೋಗಿಗಳು ಸಿದ್ಧವಾಗಿವೆ ಎಂದು ತಿಳಿಸಿದರು.
ಆದರೆ ಸುದ್ದಿ ಸಂಸ್ಥೆಯೊಂದು ವಿವಿಧ ರಾಜ್ಯಗಳಲ್ಲಿ ದಾಖಲಾದ ಸೋಂಕಿತರ ಪಟ್ಟಿಯನ್ನು ಪರಿಶೀಲನೆ ನಡೆಸಿದ್ದು ಅದರ ಪ್ರಕಾರ ದೇಶದಲ್ಲಿ ಸುಮಾರು 8,933 ಮಂದಿ ಸೋಂಕಿತರಾಗಿದ್ದು 296 ಮಂದಿ ಸಾವಿಗೀಡಾಗಿದ್ದಾರೆ.