ಗುವಾಹಟಿ, ಎ.13 (Daijiworld News/MB) : ಕೊರೊನಾ ಹರಡುವಿಕೆಯನನ್ಉ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಎ.14 ರವರೆಗೆ ದೇಶವನ್ನೇ ಲಾಕ್ಡೌನ್ ಮಾಡಿ ಆದೇಶ ನೀಡಿದ್ದು ಇದೀಗ ದೇಶದ ಹಲವು ರಾಜ್ಯಗಳು ಲಾಕ್ಡೌನ್ನ್ನು ಮುಂದುವರಿಕೆ ಮಾಡುವ ತೀರ್ಮಾನ ಕೈಗೊಂಡಿದೆ. ಏತನ್ಮಧ್ಯೆ ಅಸ್ಸಾಂ ಮತ್ತು ಮೇಘಾಲಯದ ಅಬಕಾರಿ ಇಲಾಖೆಗಳು ಸೋಮವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿವೆ.
ಇಂದಿನಿಂದ ನಿತ್ಯ ಏಳು ಗಂಟೆ ಅಸ್ಸಾಂನಲ್ಲಿ ಮದ್ಯ ಮಾರಾಟದ ಅಂಗಡಿಗಳು, ಸಗಟು ಮಾರಾಟ ಕೇಂದ್ರಗಳು, ಮದ್ಯ ತಯಾರಿಕಾ ಘಟಕಗಳು ಹಾಗೂ ಬಾಟಲಿಂಗ್ ಘಟಕಗಳು ತೆರೆಯಲು ಅಸ್ಸಾಂ ಸರ್ಕಾರ ಅವಕಾಶ ನೀಡಿದ್ದು ಪಕ್ಕದ ಮೇಘಾಲಯದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೂ ರಿಟೇಲ್ ಮದ್ಯ ಮಾರಾಟ ಕೇಂದ್ರಗಳು, ಅಂಗಡಿಗಳು ಹಾಗೂ ಸಂಗ್ರಹ ಘಟಕಗಳು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಶುಚಿತ್ವ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಾಗೆಯೇ ಅಸ್ಸಾಂನ ಅಬಕಾರಿ ಇಲಾಖೆ "ಅನುಮತಿ ನೀಡಿರುವ ದಿನಗಳಂದು ಮದ್ಯ ಮಾರಾಟ ಅಂಗಡಿಗಳು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೂ ತೆರೆದಿರಲಿವೆ. ಅಂಗಡಿಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಬಾಟಲಿ, ನಗದು ಮುಟ್ಟುವಾಗ ಗ್ರಾಹಕರು ಹಾಗೂ ಸಿಬ್ಬಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಪೂರೈಸಬೇಕು" ನಿರ್ದೇಶನ ನೀಡಿದೆ.
ಮೇಘಾಲಯದ ಅಬಕಾರಿ ಇಲಾಖೆ ಆಯುಕ್ತರಾದ ಪ್ರವಿಣ್ ಬಕ್ಷಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖೇನವಾಗಿ ಮದ್ಯ ಮಾರಾಟ ಅಂಗಡಿಗಳನ್ನು ಮತ್ತೆ ತೆರೆಯಲು ಅವಕಾಶ ನೀಡಿರುವ ಸರ್ಕಾರದ ಆದೇಶವನ್ನು ತಿಳಿಸಿದ್ದು ಮೇಘಾಲಯ ಸರ್ಕಾರದ ಮೇಲೆ ಜನರು ಮದ್ಯ ಮಾರಾಟ ಅಂಗಡಿಗಳನ್ನು ತೆರೆಯುವಂತೆ ಒತ್ತಡ ಹೇರಿದ್ದು ಬಿಜೆಪಿ ಸೇರಿದಂತೆ ಆಡಳಿತಾರೂಢ ಪಕ್ಷದ ಮೈತ್ರಿ ಪಕ್ಷಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೇಘಾಲಯದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಆದರೆ, ಅಸ್ಸಾಂನಲ್ಲಿ 29 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ.
ಈ ಹಿಂದೆ ಕೇರಳ ಸರ್ಕಾರ ಮನೆಗಳಿಗೇ ಮದ್ಯ ಪೂರೈಕೆ ಮಾಡುವಂತೆ ವೈದ್ಯರ ಸಲಹೆಗಳನ್ನು ಸ್ವೀಕರಿಸಿದ್ದು ಜನರಿಗೆ ಮದ್ಯ ಪೂರೈಕೆ ಮಾಡುವ ಆದೇಶ ಪ್ರಕಟಿಸಿತ್ತು. ಆದರೆ, ಕೇರಳ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಅಸ್ಸಾಂ ಹಾಗೂ ಮೇಘಾಲಯದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಟ್ವೀಟ್ ಮೂಲಕ ಬೇಡಿಕೆ ಇಟ್ಟಿದ್ದಾರೆ.