ಬೆಂಗಳೂರು, ಏ 13 (Daijiworld News/MSP):ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಪೊಲೀಸರು, ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಸೋಂಕು ಹರಡದಂತೆ ಹಾಗೂ ಸೋಂಕಿತರನ್ನು ಗುಣಮುಖರನ್ನಾಗಿಸಲು ಹರಸಾಹಸ ಪಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದ್ದ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ. ಕೊರೊನಾ ಸ್ಥಿತಿ ನಿರ್ಮಾಣವಾದ ಬಳಿಕ ವಲಸೆ ಕಾರ್ಮಿಕರ ಸಮಸ್ಯೆ ಸೃಷ್ಟಿಯಾಗಿದೆ. ಕೂಲಿ ಕಾರ್ಮಿಕರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಅಗತ್ಯವಿರುವಷ್ಟು ಕೊರೊನಾ ಪರೀಕ್ಷೆಯ ಕಿಟ್ ಗಳಿಲ್ಲ. ವೈದ್ಯಕೀಯ ಸಾಮಾಗ್ರಿ ಹಾಗೂ ರಕ್ಷಣಾ ಕವಚಗಳ ಕೊರತೆ ಇದೆ. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾದ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಚಿವ ಸುಧಾಕರ್ ಮಾತ್ರ ತಮ್ಮ ಕುಟುಂಬದವರೊಂದಿಗೆ ಜಾಲಿ ಮೂಡಿನಲ್ಲಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲುನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂದು ಕೊರೊನಾದ ಮಾಹಿತಿ ಜವಬ್ದಾರಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ನೀಡಲಾಗಿದೆ. ಆದರೂ ಬುದ್ದಿ ಕಲಿಯದ ಸುಧಾಕರ್ ತಮ್ಮ ಕುಟುಂಬದವರೊಂದಿಗೆ ಜಾಲಿ ಮೂಡಿನಲ್ಲಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಮೂದಲಿಸಿದ್ದ ಸುಧಾಕರ್ ಬಿಜೆಪಿಗೆ ಹಾರಿ ಬಂದು ಸಚಿವರಾಗಿದ್ದಾರೆ.
ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ ಪೋಟೋಗಳನ್ನು ಕಂಡ ನೆಟ್ಟಿಗರು, ಸಚಿವರಾಗಿ ನಿನಗೆ ನಾಚಿಕೆಯಾಗಬೇಕು, ನೀವು ರಾಜಕೀಯವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದ್ದೀರಿ ಸಾಮಾನ್ಯ ಜನರು ಕಠಿಣ ಮತ್ತು ನೋವಿನ ಲಾಕ್ಡೌನ್ನಿಂದ ಬಳಲುತ್ತಿದ್ದಾರೆ, ಆದರೆ ನೀವು ಆನಂದಿಸುತ್ತಿದ್ದೀರಿ ಎಂದು ಛೀಮಾರಿ ಹಾಕಿದ್ದಾರೆ.