ಭದೋಯಿ, ಎ.13 (DaijiworldNews/PY) : ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟು ಮಹಿಳೆಯೊಬ್ಬರು ತನ್ನ ಐದು ಮಕ್ಕಳನ್ನು ಗಂಗಾ ನದಿಗೆ ಎಸೆದ ಘಟನೆ ಉತ್ತರಪ್ರದೇಶದ ಭದೋಯಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದ್ದು, ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಮಿರ್ದುಲ್ ಯಾದವ್ ಹಾಗೂ ಆತನ ಪತ್ನಿ ಮಂಜು ಯಾದವ್ ಕೌಟುಂಬಿಕ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ಸಂಜೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ತನ್ನ ಐದು ಮಕ್ಕಳನ್ನು ಮಂಜು ಯಾದವ್ ಗಂಗಾ ನದಿಗೆ ತಳ್ಳಿ ಹತ್ಯೆ ಮಾಡುವ ಯೋಜನೆ ರೂಪಿಸಿದ್ದಳು. ಅದರಂತೆ ರಾತ್ರಿಯ ವೇಳೆಗೆ ಐವರು ಮಕ್ಕಳನ್ನು ಕರೆದುಕೊಂಡು ಹೋಗಿ ಗಂಗಾ ನದಿಗೆ ಎಸೆದಿದ್ದಾಳೆ. ಕೆಲವು ಮೀನುಗಾರರು ಹಿನ್ನೀರಿನಲ್ಲಿ ಮೀನುಗಾರಿಗೆ ನಡೆಸುತ್ತಿದ್ದ ಸಂದರ್ಭ ಕತ್ತಲೆಯಲ್ಲಿ ಮಹಿಳೆ ಹಾಗೂ ಮಕ್ಕಳು ಕೂಗಾಡುವುದನ್ನು ಕೇಳಿಸಿಕೊಂಡಿದ್ದಾರೆ. ಆದರೆ, ಮೀನುಗಾರರು ಮಾಟಗಾತಿಯೆಂದು ತಿಳಿದು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾನದಿಗೆ ಮಕ್ಕಳನ್ನು ಎಸೆದ ಬಳಿಕವೂ ಮಂಜು ಯಾದವ್ ಅಲ್ಲೇ ಉಳಿದುಕೊಂಡಿದ್ದು, ಘಟನೆಯ ಬಗ್ಗೆ ಗ್ರಾಮಸ್ಥರಿಗೆ ಭಾನುವಾರ ಮುಂಜಾನೆ ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ.