ಪಂಜಾಬ್, ಏ 13 (Daijiworld News/MSP): ಲಾಕ್ಡೌನ್ ಇದ್ದರೂ ಜಾಲಿ ರೈಡ್ ಮಾಡುತ್ತಿದ್ದ ನಿಹಾಂಗ್ ಸಿಖ್ ಯುವಕರ ವಾಹನವನ್ನು ತಡೆದು ಪಾಸ್ ಕೇಳಿದಕ್ಕೆ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿದ ಯುವಕರ ಗುಂಪು ಎಎಸ್ಐ ಕೈಯನ್ನೇ ಕತ್ತರಿಸಿ ಪರಾರಿಯದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದ ಎಎಸ್ಐ ಹರ್ಜೀತ್ ಸಿಂಗ್ ಅವರ ಕೈ ಯನ್ನು ವೈದ್ಯರು ಸತತ ಏಳೂವರೆ ಗಂಟೆಗಳ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡಿದ್ದಾರೆ.
ವೈದ್ಯರ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ಕೇಳಿಬರುತ್ತಿದ್ದು, ಎಎಸ್ಐ ಹರ್ಜೀತ್ ಸಿಂಗ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಚಂಡೀಘಡ್ ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರೊಫೆಸರ್ ಡಾ.ರಮೇಶ್ ಶರ್ಮಾ ಅವರ ನೇತೃತ್ವದ ತಂಡ ಈ ಬರೋಬ್ಬರಿ ಏಳೂವರೆ ಗಂಟೆಗಳ ಕಾಲ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ್ದು, ವೈದ್ಯರ ಈ ಶ್ರಮಕ್ಕೆ ದೇಶದ ವಿವಿಧೆಡೆಯಿಂದ ಹಾರೈಕೆ , ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ
ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಈ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೇ, ಎಎಸ್ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
"ಪೊಲೀಸ್ ಸಿಬ್ಬಂದಿಗಳು ಇತರ ಗಾಯಗೊಂಡ ಪೊಲೀಸರ ಜೊತೆ ಎಎಸ್ಐ ಹರ್ಜೀತ್ ಸಿಂಗ್ ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದು, ಹಾಗೂ ವೈದ್ಯರು ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು ಮರುಜೋಡಣೆಗೆ ಸಹಾಯಕಾರಿಯಾಗಿತ್ತು. ಭಾನುವಾರ ಬೆಳಗ್ಗೆ ಸುಮಾರು 7.45ರಲ್ಲಿ ಪಂಜಾಬ್ ಡಿಜಿ ದಿನಕರ್ ಗುಪ್ತಾ ಅವರು ಕರೆ ಮಾಡಿ ವಿಚಾರ ತಿಳಿಸಿದ್ದರು. ಕೂಡಲೇ ನಾನು ನಮ್ಮ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಡಾ.ರಮೇಶ್ ಶರ್ಮಾ ಅವರ ನೇತೃತ್ವದ ತಂಡ ರಚನೆ ಮಾಡಿ ಸಂಪೂರ್ಣ ಜವಾಬ್ದಾರಿ ಅವರಿಗೆ ನೀಡಿದೆ. ಎಲ್ಲವೂ ಸುಸೂತ್ರವಾಗಿ ನಡೆದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ" ಎಂದು PGIMER ನಿರ್ದೇಶಕ ಡಾ.ಜಗತ್ ರಾಮ್ ಅವರು ತಿಳಿಸಿದ್ದಾರೆ.