ಲಖನೌ, ಎ.13 (Daijiworld News/MB) : ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇಂಡೋನೇಷಿಯಾ ಮತ್ತು ಥಾಯ್ಲೆಂಡ್ನ 17 ಮಂದಿಯ ಕ್ವಾರಂಟೈನ್ ಅವಧಿ ಮುಗಿದಿದ್ದು ವಿಸಾ ಮತ್ತು ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘಿದ ಆರೋಪದಲ್ಲಿ ಅವರನ್ನು ಉತ್ತರ ಪ್ರದೇಶ ಸರ್ಕಾರವು ಜೈಲಿಗೆ ಕಳುಹಿಸಿದೆ.
ಕ್ವಾರಂಟೈನ್ ಅವಧಿ ಮುಗಿದ ಬಳಿಕ ಆ 17 ಮಂದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು ಈ ಸಂದರ್ಭದಲ್ಲಿ ಅವರೆಲ್ಲರೂ ವಿಸಾ ಮತ್ತು ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.
ಪೊಲೀಸರು ತಾಜ್ ಮತ್ತು ಖುರೇಷಿ ಮಸೀದಿಗಳಲ್ಲಿದ್ದ 21 ಜಮಾತಿಗಳನ್ನು ಬಂಧಿಸಿದ್ದರು. ಈ ಪೈಕಿ 17 ಮಂದಿ ವಿದೇಶಿಯರು. ಇವರೆಲ್ಲರನ್ನೂ ಮಾರ್ಚ್ 31ರಿಂದ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಅವರ ಸೋಂಕಿನ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ.
ಬಂಧಿತರ ಮೇಲೆ ಐಪಿಸಿ 269, 270, 271, 188 (ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದ 1897), ಪಾಸ್ಪೋರ್ಟ್ ಕಾಯ್ದೆ 1967ರ ಅನ್ವಯ ಆರೋಪಿಸಲಾಗಿದ್ದು ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.