ಬೆಂಗಳೂರು, ಎ.13 (DaijiworldNews/PY) : ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಮಹಾಮಾರಿ ಕೊರೊನಾ ಹಾವಳಿಯಿಂದ ಮುಂದೂಡಿಕೆಯಾಗುತ್ತಿದ್ದು, ಗ್ರಾಮ ಪಂಚಾಯತ್ ಚುನಾವಣೆಯನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಚುನಾವಣೆಯನ್ನು ನವೆಂಬರ್ನಲ್ಲಿ ನಡೆಸುವುದಾಗಿ ಆಯೋಗಕ್ಕೆ ವರಿದಿ ನೀಡಿದೆ. 1993ರ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾ.ಪಂ.ಗಳ ಅವಧಿ ಮುಗಿದ ನಂತರ ಮುಂದೂಡಲು ಅವಕಾಶವಿಲ್ಲ. ಕೇಂದ್ರ ಸರ್ಕಾರವು ಕೊರೊನಾ ವೈರಸ್ ಹರಡುವುದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವ ಕಾರಣ ರಾಜ್ಯ ಸರ್ಕಾರ ಅದೇ ಕಾರಣವನ್ನು ಮುಂದಿಟ್ಟುಕೊಂಡು ಆರು ತಿಂಗಳು ಚುನಾವಣೆ ಮುಂದೂಡಲು ನಿರ್ಧರಿಸಿದೆ.
ರಾಜ್ಯದಲ್ಲಿ ಸುಮಾರು ಆರು ಸಾವಿರ ಗ್ರಾ.ಪಂ.ಗಳಿವೆ. ಎಪ್ರಿಲ್ ಅಂತ್ಯ ಹಾಗೂ ಮೇ 15ಕ್ಕೆ ಅವುಗಳ ಅವಧಿ ಬಹುತೇಕ ಮುಕ್ತಾಯವಾಗಲಿದೆ. ರಾಜ್ಯ ಚುನಾವಣೆ ಆಯೋಗ ಗ್ರಾ.ಪಂ.ಗಳ ಅವಧಿ ಮುಗಿಯುವ 45 ದಿನ ಮೊದಲೇ ಮೀಸಲಾತಿ ಘೋಷಣೆ ಮಾಡಬೇಕು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆ ನಡೆಸದಿರಲು ನಿರ್ಧರಿಸಿರುವ ಬಗ್ಗೆ ಆಯೋಗಕ್ಕೆ ಸರ್ಕಾರ ವರದಿ ನೀಡಿದೆ. ಲಾಕ್ಡೌನ್ ಪರಿಣಾಮ ಮೇ ಅಂತ್ಯದ ವರೆಗೂ ಇರಲಿದೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಸಮಗ್ರ ಆಡಳಿತ ಯಂತ್ರ ಮೀಸಲಾಗಿದೆ.
ಗ್ರಾ.ಪಂ. ಸದಸ್ಯರ ಐದು ವರ್ಷದ ಅವಧಿ ಮೇ 15ಕ್ಕೆ ಮುಕ್ತಾಯವಾಗಲಿದ್ದು, ನಂತರ ಆಡಳಿತಾಧಿಕಾರಿಗಳನ್ನು 6 ತಿಂಗಳು ಪಂಚಾಯತ್ಗಳ ಕಾರ್ಯನಿರ್ವಹಣೆಗೆ ನೇಮಿಸಬೇಕೇ ಅಥವಾ ವಿಶೇಷ ಸಮಿತಿ ರಚನೆ ಮಾಡಬೇಕೇ ಎನ್ನುವ ಬಗ್ಗೆ ಸರ್ಕಾರ ಆಲೋಚನೆ ನಡೆಸಿದೆ ಎಂದು ತಿಳಿದುಬಂದಿದೆ.
ಆಡಳಿತಾಧಿಕಾರಿ ಬದಲು ವಿಶೇಷ ಸಮಿತಿ ರಚಿಸಿ, ಪಂಚಾಯತ್ ರಾಜ್ ಕಾಯ್ದೆಯ ಕಲಂ 8ರಡಿ ಸಮಿತಿಗೆ ಸದಸ್ಯರನ್ನು ನೇಮಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಸಮಿತಿಗೆ ಹಾಲಿ ಪಂಚಾಯತ್ ಸದಸ್ಯರನ್ನು ಅಥವಾ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿರುವ ಯಾರನ್ನಾದರೂ ಮಾಡಲು ಅವಕಾಶ ಇರುತ್ತದೆ. ಆ ಸಮಿತಿಯ ಮೂಲಕ ಚುನಾವಣೆ ನಡೆಯುವವರೆಗೂ ಪಂಚಾಯತ್ ಆಡಳಿತ ಚಟುವಟಿಕೆಗಳನ್ನು ನಡೆಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ನವೆಂಬರ್ ಅಂತ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಆದರೆ ಮುಂದಿನ ವರ್ಷ 2021ರ ಮೇಯಲ್ಲಿ ನಡೆಯುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲೇ ಗ್ರಾ.ಪಂ. ಚುನಾವಣೆ ನಡೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂಬ ಮಾತಿದೆ.
ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ವಿಶೇಷ ಸಂದರ್ಭದಲ್ಲಿ ಮುಂದೂಡಲು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯ ಸೆ. 8ರಡಿ ಅವಕಾಶ ಇದೆ. ಸರ್ಕಾರ ಗ್ರಾ.ಪಂ. ಚುನಾವಣೆ ಮುಂದೂಡುವ ವಿಚಾರದ ಬಗ್ಗೆ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದು ಕರ್ನಾಟಕ ಪಂ.ರಾಜ್ ಪರಿಷತ್ನ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದ್ದಾರೆ.