ಮೈಸೂರು, ಎ.13 (Daijiworld News/MB) : ಬಡವರಿಗೆ ಉಚಿತವಾಗಿ ತಲುಪಬೇಕಿದ್ದ ಹಾಲಿನ ಪ್ಯಾಕೆಟ್ನ್ನು ನಂದಿನಿ ಮಾರಾಟ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಮಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಸಿಲುಕಿರುವ ಬಡವರಿಗೆ ನಂದಿನಿ ಹಾಲಿನ ಪ್ಯಾಕೆಟ್ ಗಳನ್ನು ಉಚಿತವಾಗಿ ನೀಡಲು ಆದೇಶಿದ್ರೆ ಇಲ್ಲೊಬ್ಬ ಮಾಲಕ ಅದನ್ನು ಹಣಕ್ಕೆ ಮಾರಾಟ ಮಾಡ ಹೊರಟಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಮಂಡಿ ಮೊಹಲ್ಲಾದ ನಂದಿನಿ ಬೂತ್ನಲ್ಲಿ ಬಡವರಿಗೆ ನೀಡಿದ್ದ ಉಚಿತ ಹಾಲು ಮಾರಾಟ ಮಾಡುತ್ತಿದ್ದ ಕಾರಣದಿಂದಾಗಿ ಹಾಲಿನ ಕೇಂದ್ರಕ್ಕೆ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಮಹದೇವಸ್ವಾಮಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು ಹಾಲಿನ ಬೂತ್ ಮಾಲಕನ ವಿರುದ್ಧ ಕಾನೂನು ಮಾಪನಶಾಸ್ತ್ರ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಈ ಕುರಿತಾಗಿ ಜನರಿಗೆ ಮಾಹಿತಿ ನೀಡಿರುವ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಮಹದೇವಸ್ವಾಮಿ, "ಸರಕಾರದಿಂದ ಉಚಿತವಾಗಿ ನೀಡುತ್ತಿರುವ ಹಾಲಿಕ ಪ್ಯಾಕೆಟ್ ಮೇಲೆ ಮಾರಾಟ ಮಾಡುವಂತಿಲ್ಲ ಎಂದು ಬರೆಯಲಾಗುತ್ತದೆ. ಗ್ರಾಹಕರು ಹಾಲನ್ನು ಕೊಂಡುಕೊಳ್ಳುವಾಗ ಅದನ್ನು ನೋಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.