ರಾಯಚೂರು, ಎ.13 (DaijiworldNews/PY) : ದೇಶಾದ್ಯಂತ ಮೊದಲ ಹಂತದ ಲಾಕ್ಡೌನ್ ಎ.14ರಂದು ಮುಗಿಯುತ್ತದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಮಾಡಿದ್ದು, ಇಂದು ಅಥವಾ ನಾಳೆಯೊಳಗೆ ಲಾಕ್ಡೌನ್ ಮುಂದುವರಿಸಬೇಕೆ ಬೇಡವೇ ಎಂಬ ವಿಚಾರದ ಬಗ್ಗೆ ಪ್ರಕಟಿಸುವರು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ. ಕೊರೊನಾ ಸೋಂಕು ಚೀನಾದಲ್ಲಿ ಹತೋಟಿಗೆ ಬಂದಿದ್ದು, ಮತ್ತೆ ಶುರುವಾಗಿದೆ. ಇದು ಆತಂಕಕಾರಿ ವಿಷಯವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಿಲ್ಲ. ಈ ವೈರಸ್ ಸದ್ಯಕ್ಕೆ ಮದ್ದು ಸಿಕ್ಕಿಲ್ಲ. ತಮ್ಮ ತಮ್ಮ ಮನೆಗಳಲ್ಲಿರುವುದೇ ಮದ್ದು. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕಿದೆ. ಲಾಕ್ಡೌನ್ ಮುಂದುವರಿಸುವ ಬಗ್ಗೆ ಎಲ್ಲಾ ರಾಜ್ಯ ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಕೊರೊನಾ ವೈರಸ್ ಪಕ್ಕದ ರಾಜ್ಯಗಳಲ್ಲಿ ಹೆಚ್ಚಾಗಿದೆ. ಹಾಗಾಗಿ ಪ್ರಮುಖ ಹೆದ್ದಾರಿಗಳನ್ನು ಹಾಗೂ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇನ್ನು ಸಾರಿಗೆ ವ್ಯವಸ್ಥೆ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಿ ಲಾಕ್ಡೌನ್ ಮಾಡಬೇಕು, ಎಲ್ಲಿ ಲಾಕ್ಡೌನ್ ಮಾಡಬಾರದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕೊರೊನಾ ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲ ಮಾಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸಲಾಗುವುದು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ರೈತರು ಕೃಷಿ ಯಂತ್ರೋಪಕರಣಗಳನ್ನು ಉಪಯೋಗಿಸಬೇಕು. ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.