ಗಂಗಾವತಿ, ಎ.13 (Daijiworld News/MB) : ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ಹಾಗೂ ಗಾಳಿಯಿಂದಾಗಿ ಭತ್ತದ ಬೆಳೆ ನಾಶವಾಗಿ ನಷ್ಟದಲ್ಲಿರುವ ರೈತರಿಗೆ ಅತಿ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಕಳೆದ ಮಂಗಳವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಗಾಳಿಯಿಂದಾಗಿ ಕಟಾವು ಮಾಡಬೇಕಾಗಿದ್ದ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿದ್ದ ಭತ್ತ ಬೆಳೆ ನಾಶವಾಗಿದೆ.
ಈ ಕುರಿತಾಗಿ ಸೋಮವಾರ ಬೆಳಿಗ್ಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಬಿ ಸಿ ಪಾಟೀಲ್ ನೇತೃತ್ವದ ಸಂಸದ ಕರಡಿ ಸಂಗಣ್ಣ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು, ಹಾಲಪ್ಪ ಆಚಾರ್ ಮಾಜಿ ಶಾಸಕ ಜಿ.ವೀರಪ್ಪ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹಣಮನ ಗೌಡ ಬೆಳಗುರ್ಕಿ ಅವರನ್ನು ಒಳಗೊಂಡ ನಿಯೋಗವು ಕಂದಾಯ ಮತ್ತು ಕೃಷಿ ಇಲಾಖೆ ನಡೆಸಿದ ಸರ್ವೆ ವರದಿಯೊಂದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿ ಶೀಘ್ರವೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.