ಮೈಸೂರು/ಕಲಬುರ್ಗಿ, ಎ.13 (Daijiworld News/MB) : ಎರಡು ಪ್ರತ್ಯೇಕ ಪ್ರಕರಣದಲ್ಲಿ ರಸ್ತೆ ಮೇಲೆ ಉಗುಳುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಜೆ ಎಸ್ ಎಸ್ ಬಡಾವಣೆಯಲ್ಲಿ ಸಯ್ಯದ್ ಎಂಬಾತ ಪದೇ ಪದೇ ನೆಲದ ಮೇಲೆ ಉಗುಳುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಆ ಕೂಡಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವ್ಯಕ್ತಿ ಬೆಂಗಳೂರಿನಿಂದ ಅಧಿಕೃತವಾಗಿ ಪಾಸ್ ಪಡೆದಿದ್ದು ಮಂಗಳಮುಖಿಯರಿಗಾಗಿ ಅಕ್ಕಿಯನ್ನು ಕೊಡಲೆಂದು ಸ್ಕೂಟರ್ನಲ್ಲಿ ಇಲ್ಲಿಗೆ ಬಂದಿದ್ದು ಮಂಗಳಮುಖಿಯರನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಈತ ಅನುಮಾನ್ಸಪವಾಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಕಲಬುರ್ಗಿಯ ರಾಮಮಂದಿರ ಸರ್ಕಲ್ ಬಳಿಯ ಧನ್ವಂತರಿ ಆಸ್ಪತ್ರೆ ಬಳಿ ಭಾನುವಾರ ಓರ್ವ ವ್ಯಕ್ತಿ ಪದೇ ಪದೇ ಉಗುಳುತ್ತಿದ್ದು ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಈ ರೀತಿ ಅನುಮಾನಾಸ್ಪದವಾಗಿ ಕಂಡ ಆಳಂದ ತಾಲೂಕಿನ ವಿ.ಕೆ.ಸಲಗರ ಗ್ರಾಮದ ರಬ್ಬಾನಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಪದೇ ಪದೇ ಹೇಳಿಕೆಯನ್ನು ಬದಲಾಯಿಸುತ್ತಲಿದ್ದು ಆತನನ್ನು ತಪಾಸಣೆಗಾಗಿ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಬಾನಿಯ ಸಹೋದರಿ ಆಸ್ಪತ್ರೆಗೆ ಬಂದಿದ್ದು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ.