ಬೆಂಗಳೂರು, ಏ 13 (Daijiworld News/MSP): ಸಾಂಕ್ರಾಮಿಕ ರೋಗ ಕೊರೋನಾ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಂಭೀರ ಅಪಾಯಕ್ಕೆ ಸಿಲುಕುವಂತೆ ಮಾಡಿದ್ದು, ಮತ್ತೆ ಅದನ್ನು ಸರಿಪಡಿಸಲು ಸುದೀರ್ಘ ಕಾಲಾವಕಾಶಗಳ ಅಗತ್ಯವಿದೆ. ಆದರೂ ಸದ್ಯದ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸಲಿದ್ದು ಈ ಹಿನ್ನಲೆಯಲ್ಲಿ ಬಿಡಿಎ ವ್ಯಾಪ್ತಿಯ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ, ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬಳಿಕ ಪತಿಕಾಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ರಾಜ್ಯದ ಆರ್ಥಿಕ ಮಟ್ಟ ಅಪಾಯಕ್ಕೆ ಕುಸಿದಿದೆ. ಸುಧಾರಣೆಗಾಗಿ ಹಲವಾರು ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ. ಆರ್ಥಿಕತೆಯನ್ನು ಮತ್ತೆ ಸುಸ್ಥಿಗೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರಾಜ್ಯದ ಪರಿಸ್ಥಿತಿ ಸುಧಾರಿಸಲು ಆರ್ಥಿಕ ಯುದ್ಧ ನಡೆಸುವ ಆಗತ್ಯವಿದೆ. ನಮಗೆ ಬೇರೆ ದಾರಿಯಿಲ್ಲ. ಮಾರ್ಚ್ 5ರ ಬಜೆಟ್ ವೇಳೆ ಘೋಷಣೆ ಮಾಡಿದ್ದ ಯೋಜನೆಗಳನ್ನು ಸ್ಥಗಿತಗೊಳಿಸುವ ಅಗತ್ಯವಿದೆ. ಅಲ್ಲದೆ ಬಿಡಿಎ ವ್ಯಾಪ್ತಿಯ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಮಾಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಸುಮಾರು 15 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.