ವಿಶಾಖಪಟ್ಟಣ, ಎ.13 (DaijiworldNews/PY) : ವಿಶಾಖಪಟ್ಟಣಂ ಮುನಿಸಿಪಲ್ ಕಾರ್ಪೊರೇಷನ್ನ ಆಯುಕ್ತರಾಗಿರುವ ಸೃಜನಾ ಗುಮಾಲಾ ಅವರು ಕೈಮೇಲೆ ಮಗುವನ್ನು ಮಲಗಿಸಿಕೊಂಡೇ ಕರ್ತವ್ಯ ನಿರ್ವಹಣೆ ನಡೆಸಿದ್ದಾರೆ. ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿರುವ ಐಎಎಸ್ ಅಧಿಕಾರಿ, ಅದಾಗಲೇ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ, 6 ತಿಂಗಳವರೆಗೆ ಉದ್ಯೋಗದಲ್ಲಿರುವ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ಸೃಜನಾ ಅವರು ಕಳೆದ ವಾರದಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
2013ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಸೃಜನಾ ಅವರು, ಇಂತಹ ವೇಳೆಯಲ್ಲಿ ಆಡಳಿತದಲ್ಲಿ ಸಹಕಾರ ನೀಡುವುದು ನನ್ನ ಜವಾಬ್ದಾರಿಯಾಗಿದೆ. ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಒಬ್ಬರಲ್ಲೊಬ್ಬರು ಸಾಮರ್ಥ್ಯ ವನ್ನು ಹೆಚ್ಚಿಸಬೇಕಿದೆ. ಇದು ನನ್ನ ಪಾಲಿಗೆ ಬಂದ ಕರ್ತವ್ಯದ ಕರೆಯಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಇಂತಹ ಕೊರೊನಾ ಯೋಧರನ್ನು ಪಡೆದಿರುವ ದೇಶ ಸುಕೃತವಾಗಿದೆ.ಕರ್ತವ್ಯ ಬದ್ದತೆಗೆ ನೇರ ಉದಾಹರಣೆಯಾಗಿರುವುದಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.