ದಾವಣಗೆರೆ, ಎ.13 (DaijiworldNews/PY) : ನಾನು ಹೋರಾಟದ ಮೂಲಕವೇ ಶಾಸಕನಾಗಿದ್ದೇನೆ. ಕಾಂಗ್ರೆಸ್ ಮುಂಖಂಡರಿಗೆ ಪ್ರಕರಣ ದಾಖಲಿಸುವ ಮುಖಾಂತರ ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ. ನನಗೆ ಇದು ಇನ್ನಷ್ಟು ಕಾರ್ಯ ನಿರ್ವಹಿಸಲು ಆಶೀರ್ವಾದ ಹಾಗೂ ಪ್ರೇರಣೆ ದೊರೆಯಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಚಿಕಿತ್ಸೆಗೆ ಸ್ಪಂದಿಸದ ತಮ್ಲೀಗಿಗಳನ್ನು ಗುಂಡಿಕ್ಕಿ ಕೊಂದರೂ ತಪ್ಪಲ್ಲ ಎಂದು ನೀಡಿದ್ದ ಹೇಳಿಕೆ ವಿರುದ್ದ ಕಾಂಗ್ರೆಸ್ ಮುಖಂಡ ಸುಭಾಷಚಂದ್ರ ಅವರು ಪ್ರಕರಣ ದಾಖಲಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ 2003ರಲ್ಲಿ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದ್ದ ವೇಳೆ ನನ್ನನ್ನು ಬಂಧಿಸಿ 15 ದಿನಗಳ ಕಾಲ ಬೆಳಗಾವಿ ಜೈಲಿಗಟ್ಟಿದ್ದರು. ಹೋರಾಟ ಮೂಲಕವೇ ನಾನು ಶಾಸಕನಾಗಿದ್ದೇನೆ. ಹಿಂದೆ ಚುನಾವಣೆಗೆ 15 ದಿನಗಳಿರುವಾಗ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಎ.ಎಚ್.ಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಚಾರಕ್ಕೆ ಬಳ್ಳಾರಿ ಜೈಲಿಗೆ ನನ್ನನ್ನು ಕಳುಹಿಸಿದ್ದರು. ನನ್ನ ಮೇಲೆ ಕಾಂಗ್ರೆಸ್ ಶಾಸಕರಿಗೆ ಬಹಳ ಪ್ರೀತಿ ಇದೆ. ಜೈಲಿಗೆ ಕಳುಹಿಸುವುದಾದರೆ ಕಳುಹಿಸಲಿ ಎಂದರು.