ಬೆಂಗಳೂರು, ಎ.14 (Daijiworld News/MB) : ಕೊರೊನಾ ವೈರಸ್ಗೆ ಬಲಿಯಾಗುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗುತ್ತಿದ್ದು ಸೋಮವಾರ ಒಂದೇ ದಿನ ಇಬ್ಬರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ 55 ವರ್ಷದ ಬಟ್ಟೆ ವ್ಯಾಪರಿಯೊಬ್ಬರು ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವೃದ್ಧರೋರ್ವರು ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಸಾವಿಗೀಡಾದವರ ಪೈಕಿ ಕಲಬುರಗಿಯ ವ್ಯಕ್ತಿಯನ್ನು ಎ.10 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೋಮವಾರ ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ ಹೊಸ 16 ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 247 ಕ್ಕೆ ಏರಿಕೆಯಾಗಿದೆ.