ನವದೆಹಲಿ, ಎ.14 (Daijiworld News/MB) : ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು, ಅಧಿಕಾರಿಗಳ ಹಠಕ್ಕಿಂತ ದೊಡ್ಡ ದೇಶಭಕ್ತಿಯಿಲ್ಲ. ತಾಳ್ಮೆ ಮತ್ತು ಪರಿಶ್ರಮದಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ದೇಶವಾಸಿಗಳಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ಕೆಲವೇ ಗಂಟೆಗಳ ಮೊದಲು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಸೋನಿಯಾ, ಕೊರೊನಾ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಎಲ್ಲರನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದ್ದಾರೆ.
ಈಗ ಉಂಟಾಗಿರುವ ಆರೋಗ್ಯದ ಬಿಕ್ಕಟ್ಟನ್ನು ನಾವು ಏಕತೆ, ಶಿಸ್ತು ಮತ್ತು ವಿಶ್ವಾಸದಿಂದ ಸೋಲಿಸುತ್ತೇವೆ. ಈ ಸಂದರ್ಭದಲ್ಲಿ ತಾಳ್ಮೆಯಿಂದ ಇರುವ ದೇಶವಾಸಿಗಳಿಗೆ ಧನ್ಯವಾದಗಳು. ಹಾಗೆಯೇ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ ಎಂದು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪನ್ಮೂಲದ ಕೊರತೆಯಿದ್ದರೂ ಕೊರೊನಾ ವಿರುದ್ಧವಾಗಿ ಹೋರಾಡುತ್ತಿದೆ. ಈ ಯುದ್ಧ ಗೆಲ್ಲಲು ಸರ್ಕಾರಕ್ಕೆ ಜನರ ಸಹಕಾರ ಅತ್ಯಗತ್ಯ. ಜನರು ಮನೆಯಲ್ಲಿಯೇ ಇದ್ದು ಲಾಕ್ಡೌನ್ ನಿಯಮ ಪಾಲಿಸಬೇಕು ಎಂದು ತಿಳಿಸಿದ ಅವರು ವೈದ್ಯರು ಹಾಗೂ ಆಶಾಕಾರ್ಯಕರ್ತೆಯರ ಮೇಲೆ ನಡೆಯುವ ದಾಳಿಯನ್ನು ಖಂಡಿಸಿದ್ದಾರೆ.