ನವದೆಹಲಿ, ಎ.14 (Daijiworld News/MB) : ಖಾಸಗಿ ಪ್ರಯೋಗಾಲಯಗಳಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಮಾತ್ರ ಉಚಿವಾಗಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಬೇಕು ಎಂದು ಸೋಮವಾರ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಪರೀಕ್ಷೆಗೆ ಸಂಬಂಧಿಸಿದಂತೆ ಈ ಮೊದಲು ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಡಾ. ಕುಶಾಲ್ ಕಾಂತ್ ಮಿಶ್ರಾ ಅರ್ಜಿ ಸಲ್ಲಿಸಿದ್ದರು. ಖಾಸಗಿ ಪ್ರಯೋಗಾಲಯಗಳಲ್ಲಿ ಈಗಾಗಲೇ ಪಿಎಂಜೆಎವೈ ಫಲಾನುಭವಿಗಳಿಗೆ ಉಚಿವಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಮಾಣ ಪತ್ರ ಸಲ್ಲಿಸಿದ್ದು ಇದಾದ ಬಳಿಕ ಸುಪ್ರೀಂ ಕೋರ್ಟ್ ಈ ಆದೇಶವನ್ನು ತಿಳಿಸಿದೆ.
ಡಾ. ಕುಶಾಲ್ ಕಾಂತ್ ಮಿಶ್ರಾ ಸಲ್ಲಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ಬಡತನ ರೇಖೆಗಿಂತಲೂ ಕೆಳಗಿರುವ ಬಡವರಿಗೆ ಮಾತ್ರ ಖಾಸಗಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಕೊರೊನಾ ಪರೀಕ್ಷೆ ನಡೆಸಬೇಕು. ಉಳಿದವರಿಗೆ ಉಚಿತವಾಗಿ ಪರೀಕ್ಷೆ ನಡೆಸಬಾರದು. ಹಣ ಪಾವತಿ ಮಾಡಿ ಉಳಿದವರು ಪರೀಕ್ಷೆಗೆ ಒಳಗಾಗಬೇಕು ಎಂದು ನಿರ್ದೇಶನ ನೀಡಿದೆ.
ಈ ಕುರಿತಾಗಿ ಐಸಿಎಂಆರ್, ಈಗಾಗಲೇ ಖಾಸಗಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು ಈ ಕುರಿತು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು.