ನವದೆಹಲಿ, ಏ 14 (Daijiworld News/MSP):ಕರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್ಡೌನ್ ಅವಧಿಯ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಏನು ಹೇಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಮುಂದಿನ 19 ದಿನಗಳ ಕಾಲ ಅಂದರೆ ಮೇ.3 ರವರೆಗೆ ಭಾರತದಾದ್ಯಂತ ಲಾಕ್ ಡೌನ್ ಘೋಷಿಸಿ ಸಪ್ತ ಸೂತ್ರಗಳ ಭಾರತದ ಮುಂದಿರಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಇನ್ನು 19 ದಿನಗಳ ಕಾಲ ಲಾಕ್ ಡೌನ್ ಮುಂದುವರೆಸುವ ಅಗತ್ಯವಿದೆ. ಇನ್ನು ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣಗೊಳ್ಳಲಿದೆ. ಏ.20ರವರೆಗೆ ಕೊರೊನಾ ಸ್ಥಿತಿ ಕುರಿತಂತೆ ಅವಲೋಕನ ನಡೆಸಲಾಗುವುದು. ಆ ಬಳಿಕ ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಲ್ಲಿ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಾವು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸರಿಯಾಗಿದೆ. ಆರ್ಥಿಕ ದೃಷ್ಠಿಯಿಂದ ನೋಡಿದರೆ ನಾವು ಭಾರಿ ಬೆಲೆ ತೆರಲಿದ್ದೇವೆ ಆದರೆ, ಭಾರತೀಯರ ಪ್ರಾಣಕ್ಕಿಂತ ಆರ್ಥಿಕತೆ ಮುಖ್ಯವಲ್ಲ ಎಂದು ಹೇಳಿದ್ದಾರೆ. ಎಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣ ಅನುಷ್ಠಾನಗೊಳಿಸಲಾಗುತ್ತದೆ. ಆ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಆ ಬಳಿಕ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು.
ಮೇ 3 ರವರೆಗೂ (19 ದಿನಗಳ) ಲಾಕ್'ಡೌನ್ ಕುರಿತಂತೆ ಏಪ್ರಿಲ್ 15 ರಂದು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಲಿದೆ. ಕೃಷಿ, ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹೊಸ ಮಾರ್ಗಸೂಚಿ ಅನ್ವಯ ವಿನಾಯಿತಿ ನೀಡಲಾಗುತ್ತದೆ. ಕೊರೊನಾ ವಿರುದ್ಧ ಭಾರತದ ಹೋರಾಟ ಶಕ್ತಿಶಾಲಿಯಾಗಿ ಮುಂದುವರೆಯುತ್ತಿದೆ. ನಿಮ್ಮ ತ್ಯಾಗದಿಂದಾಗಿ ಕೊರೊನಾದಿಂದ ಆಗಬಹುದಾಗಿದ್ದ ಪರಿಣಾಮ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಭಾರತೀಯರು ಕಷ್ಟಗಳನ್ನು ಸಹಿಸಿ ಭಾರತವನ್ನು ರಕ್ಷಿಸಿದ್ದೀರಿ,ನಿಮಗೆ ಎಷ್ಟು ಕಷ್ಟವಾಗಿರಬಹುದು ಅಂತ ನನಗೆ ಗೊತ್ತಿದೆ. ಕೆಲವರಿಗೆ ಊಟಕ್ಕೂ ತೊಂದರೆಯಾಗಿದೆ. ಕೆಲವರು ಕುಟುಂಬಸ್ಥರಿಂದ ದೂರ ಇರಬೇಕಾಗಿದೆ. ನೀವು ಸೈನಿಕರಂತೆ ಹೋರಾಡುತ್ತಿದ್ದೀರಿ. ನಿಮಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಸಪ್ತ ಸೂತ್ರದ (‘ಸಾಥ್ ಬಾತೋಂ ಮೇ ಆಪ್ ಕಾ ಸಾಥ್’)ಬಗ್ಗೆ ಮಾತನಾಡಿರುವ ಪ್ರಧಾನಿ ವಯೋವೃದ್ಧರ ಮೇಲೆ ನಿಗಾ ಇರಿಸಿ, ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚಿನ ಗಮನ ಇರಲಿ. ಲಾಕ್'ಡೌನ್ ಸಾಮಾಜಿಕ ಅಂತರ ಪಾಲಿಸಿ, ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರದ ‘ಲಕ್ಷ್ಮಣ ರೇಖೆ’ಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ. ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಸಚಿವಾಲಯದ ಸೂಚನೆಗಳನ್ನು ಪಾಲನೆ ಮಾಡಿ. ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ ಬಳಕೆ, ಮಾಡಿ. ಇತರರಿಗೂ ಈ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.