ನವದೆಹಲಿ, ಏ 14 (Daijiworld News/MSP): ಕೊರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್ಡೌನ್ ಅವಧಿಯ ಕೊನೇ ದಿನವಾದ ಇಂದು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಾಳೆಯಿಂದ ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ.
ಏಪ್ರಿಲ್ 20ರವರೆಗೆ ಲಾಕ್ ಡೌನ್ ನ್ನು ಎಲ್ಲಾ ರಾಜ್ಯದಲ್ಲಿ ಕಠಿಣವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಆ ಬಳಿಕ ಕೊರೊನಾ ನಿಯಂತ್ರಣದ ಪರಿಸ್ಥಿತಿಯನ್ನು ಅವಲೋಕಿಸಿ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು. ಈ ಬಗ್ಗೆ ಕೇಂದ್ರದಿಂದ ಹೊಸ ಗೈಡ್ ಲೈನ್ ಪ್ರಕಟವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹೊಸ ಗೈಡ್ ಲೈನ್ ನಲ್ಲಿ, ರೈತರ ಬೆಳೆದ ಬೆಳೆಗಳ ಕಟಾವಿನ ಸಮಯ ಇದಾಗಿರುವುದರಿಂದ ರೈತರ ಚಟುವಟಿಗೆಗಳಿಗೆ ವಿನಾಯಿತಿ, ಬ್ಯಾಂಕಿಂಗ್ ಕ್ಷೇತ್ರ , ಕಟ್ಟಡ ನಿರ್ಮಾಣ, ಮೂಲಸೌಕರ್ಯ, ಔಷಧಿ ತಯಾರಿಕಾ ಕಂಪನಿಗಳು , ಮಾಸ್ಕ್ ತಯಾರಿಕೆ, ಸ್ಯಾನಿಟೈಸರ್, ಪಿಪಿಇ ಕಿಟ್ ತಯಾರಿಕೆ, ಸರ್ಜಿಕಲ್ ಗ್ಲೈಸ್, ರಬ್ಬರ್ ಕೋಟೆಡ್, ಏಪ್ರನ್, ರಬ್ಬರ್ ಶೂ, ಸೇರಿದಂತೆ ಇತರೇ ಕ್ಷೇತ್ರಗಳಿಗೆ ಕೆಲವು ಷರತ್ತುಗಳೊಂದಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.
ಒಟ್ಟಾರೆ ಇಂದಿಗೆ ಮೊದಲನೇ ಹಂತದ ಲಾಕ್ಡೌನ್ ಮುಗಿದಿದ್ದು, ನಾಳೆಯಿಂದ ಹೊಸ ಮಾರ್ಗಸೂಚಿ ಕ್ರಮಗಳನ್ನ ರಾಜ್ಯ ಸರ್ಕಾರಗಳಿಗೆ ಕೇಂದ್ರ ರವಾನಿಸಿ, ಕ್ರಮಗಳನ್ನ ಅನುಸರಿಸಲೇಬೇಕೆಂದು ಸೂಚನೆ ನೀಡಲಿದೆ.