ಬೆಂಗಳೂರು, ಏ 14 (Daijiworld News/MSP): ಪ್ರಧಾನಿ ನರೇಂದ್ರಮೋದಿಯವರು ಘೋಷಿಸಿರುವ ಮೇ.3ರ ವರೆಗೆ ಲಾಕ್ ಡೌನ್ ಘೋಷಣೆಯನ್ನು ನಾನು ಸ್ವಾಗತಿಸುತ್ತೇವೆ. ಅಲ್ಲದೆ ಕೇಂದ್ರದ ಸರ್ಕಾರ ಮಾರ್ಗಸೂಚಿಗಳನ್ನ ನಾವು ಪಾಲಿಸುತ್ತೇವೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ಭಾಷಣದ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೇಂದ್ರ ಸರ್ಕಾರ ನಾಳೆ ಬಿಡುಗಡೆ ಮಾಡಲಿರುವ ಮಾರ್ಗ ಸೂಚಿಯಂತೆ ಕ್ರಮ ಕೈಗೊಳ್ಳಲಿದ್ದೇವೆ. ಈ ಹಿನ್ನಲೆಯಲ್ಲಿ ಏಪ್ರಿಲ್ 20ರವರೆಗೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್ಡೌನ್ ಪಾಲಿಸಲಾಗುತ್ತದೆ. ಆ ಬಳಿಕ ಕೇಂದ್ರದ ಮಾರ್ಗಸೂಚಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ 57,633 ವಾಹನಗಳನ್ನ ಜಪ್ತಿ ಮಾಡಲಾಗಿದ್ದು ಸುಮಾರು 4169 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದ 2185 ಜನರನ್ನ ಬಂಧಿಸಲಾಗಿದೆ. ಇಲ್ಲಿಯವರೆಗೆ 95 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 20ರವರೆಗೆ ಇನ್ನಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ. ಜನರು ಇದಕ್ಕೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದು ಕೇಳಿಕೊಂಡರು.
ಈಗಾಗಲೇ ರಾಜ್ಯದಲ್ಲಿ ಕೃಷಿಕರಿಗೆ ತೊಂದರೆಯಾಗದಂತೆ ಬೆಳೆದ ಬೆಳೆಗಳ ವಿಲೇವಾರಿ ಮಾರಾಟ ಹಾಗೂ ರಸಗೊಬ್ಬರ, ಬೀಜದ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಕೆಲವು ನಿಯಮ ಸಡಿಲಿಕೆ ಮಾಡಲು ಕೇಂದ್ರ ಗೈಡ್ ಲೈನ್ ಗಾಗಿ ಕಾಯುತ್ತಿದ್ದೇವೆ ಎಂದರು.