ಬೆಂಗಳೂರು, ಎ.14 (Daijiworld News/MB) : ಮೊದಲ ಹಂತದ ಕೊರೊನಾ ಲಾಕ್ಡೌನ್ ಇಂದಿಗೆ ಮುಕ್ತಾಯವಾಗುತ್ತಿದ್ದು ಪ್ರಧಾನಿ ಮೋದಿ ಇಂದು ಭಾಷಣ ಮಾಡಿ ಲಾಕ್ಡೌನ್ನ್ನು ಮೇ. ಮೂರರವರೆಗೆ ಮುಂದುವರೆಸಿ ಆದೇಶ ಹೊರಡಿಸಿದ್ದಾರೆ. ಆದರೆ ಭಾಷಣದಲ್ಲಿ ಎಲ್ಲಿಯೂ ಆರ್ಥಿಕ ನೆರವಿನ ಕುರಿತಾಗಿ ಮಾತೇ ಆಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ.
ಪ್ರಧಾನಿ ಮೋದಿಯ ಭಾಷಣದ ಕುರಿತಾಗಿ ಮಾತನಾಡಿದ ಅವರು, ಜನರು ಲಾಕ್ಡೌನ್ನಿಂದಾಗಿ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನತೆಗೆ ಸ್ಥೈರ್ಯ ತುಂಬುವ ಮಾತುಗಳನ್ನು ಆಡಬೇಕಿತ್ತು. ಆದರೆ ಅವರು ದೇಶಕ್ಕೆ ಆರ್ಥಿಕ ಚೈತನ್ಯ ತುಂಬುವ ಪ್ರಸ್ತಾವ ಮಾಡಲೇ ಇಲ್ಲ ಎಂದು ಅವರು ಹೇಳಿದ್ದಾರೆ.
ನಾವೆಲ್ಲರೂ ಪ್ರಧಾನಿ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿಯೇ ಇರುತ್ತೇವೆ. ಆದರೆ ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ನೋಡುವ ರೀತಿಯೇ ಬದಲಾಗಿದೆ. ಲಾಕ್ಡೌನ್ ಬಳಿಕ ನಮ್ಮ ಬದುಕು ಏನಾಗುತ್ತೆ? ರೈತರು ಮತ್ತು ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಏನು? ಅವರು ಮುಂದೆ ಮಾಡುವುದಾದರೂ ಏನು? ಎಂದು ಡಿಕೆಶಿ ಪ್ರಶ್ನಿಸಿದರು.
ನಮಗೆಲ್ಲರಿಗೂ ಪ್ರಧಾನಿ ಮೇಲೆ ಅಪಾರವಾದ ಗೌರವವಿದೆ. ನಾವೆಲ್ಲರೂ ಅವರ ಆಚಾರ ವಿಚಾರಗಳನ್ನು ಗೌರವಿಸುತ್ತಿದ್ದೇವೆ. ಎಲ್ಲಾ ರೀತಿಯ ಸಹಕಾರವನ್ನೂ ಅವರಿಗೆ ನೀಡುತ್ತಿದ್ದೇವೆ. ಮೇ ಮೂರರವರೆಗೆ ಲಾಕ್ಡೌನ್ ಮುಂದುವರೆಸಿದ ಅವರ ಆದೇಶವನ್ನು ನಾವೆಲ್ಲರೂ ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತೇವೆ. ಆದರೆ ಪ್ರಧಾನಿ ಭಾಷಣದಲ್ಲಿ ಏನಾದರೂ ಆರ್ಥಿಕ ನೆರವಿನ ಕುರಿತಾಗಿ ಮಾತನಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಬಹಳ ನಿರಾಸೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾಷಣದಲ್ಲಿ ಪ್ರಧಾನಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡಿರುವುದು ಶ್ಲಾಘನಾರ್ಹ. ಹಾಗೆಯೇ ಸಂವಿಧಾನದ ರಕ್ಷಣೆ, ಸಮಾಜದ ಎಲ್ಲಾ ವರ್ಗಗಳ ರಕ್ಷಣೆ, ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯುವ ಕಾರ್ಯದ ಭರವಸೆಯನ್ನು ಸರ್ಕಾರ ಜನರಲ್ಲಿ ಮೂಡಿಸಬೇಕು ಎಂದು ಮನವಿ ಮಾಡಿದರು.