ನವದೆಹಲಿ, ಏ 14 (Daijiworld News/MSP): ಕೊರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್ಡೌನ್ ಅವಧಿಯ ಕೊನೇ ದಿನವಾದ ಇಂದು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಾಳೆಯಿಂದ ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಏ.೩೦ ರವರೆಗೆ ಲಾಕ್ಡೌನ್ ಅವಧಿಯನ್ನು ವಿಸ್ತರಣೆ ಮಾಡಬಹುದು ಎಂಬ ವಿಚಾರದ ಬಗ್ಗೆ ಬಹುತೇಕರಿಗೆ ಅರಿವಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕ ಸಹಿತ ಹಲವು ರಾಜ್ಯಗಳು ಏ.೩೦ ರವರೆ ಲಾಕ್ ಡೌನ್ ಘೋಷಣೆ ಮಾಡಿದ್ದವು.
ಇದಲ್ಲದೆ ಪ್ರಧಾನಿಯವರು ಲಾಕ್ಡೌನ್ಗೆ ಸಂಬಂಧಿಸಿದಂತೆ ಈ ಹಿಂದೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ್ದ ವೀಡಿಯೋ ಕಾನ್ಫರೆನ್ಸ್ನಲ್ಲಿಯೂ ದಿನಾಂಕ ಏಪ್ರಿಲ್ 30ವರೆಗೆ ಲಾಕ್ಡೌನ್ ಮುಂದುವರಿಸುವ ಬಗ್ಗೆಯೇ ಚರ್ಚೆಯಾಗಿತ್ತು.
ಹೀಗಾಗಿ ಪ್ರಧಾನಿ ಮೋದಿ ಅವರು ಲಾಕ್ ಡೌನ್ ವಿಸ್ತರಣೆ ಮಾಡಿ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಇಂದು ಬಾಕಿ ಇತ್ತು. ಆದರೆ ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿದ ಪ್ರಧಾನಿ ಮೋದಿ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ. ಹಾಗಿದ್ದರೆ ಲಾಕ್ ಡೌನ್ ಅವಧಿಯನ್ನು ಇನ್ನು ಮೂರು ದಿನ ಹೆಚ್ಚು ಮಾಡಿದ್ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಸಹಜವಾಗಿ ಕಾಡುತ್ತಿದೆ. ಮೂರು ದಿನ ಹೆಚ್ಚಳ ಮಾಡಿರುವ ಉದ್ದೇಶವಿಷ್ಟೇ...ಮೇ 1 ಕಾರ್ಮಿಕರ ದಿನದ ಹಿನ್ನಲೆಯಲ್ಲಿ ಸರ್ಕಾರಿ ರಜೆ ಇದೆ ಇನ್ನು ಮೇ 2 ಮತ್ತು 3 ಶನಿವಾರ ಮತ್ತು ಭಾನುವಾರ ಅಂದರೆ ವೀಕೆಂಡ್. ರಜ ಅವಧಿಯಲ್ಲಿ ಜನ ಗುಂಪಾಗಿ ಹೊರಗೆ ಸೇರುವ ಸಾಧ್ಯತೆ ಅಧಿಕ ಹೀಗಾಗಿ ಕೊರೊನಾ ಹರಡುವ ಅವಕಾಶವೂ ಜಾಸ್ತಿ. ಇದಕ್ಕಾಗಿ ಮುಂದಾಗುವ ಅನಾಹುತ ಆಗುವುದನ್ನು ತಡೆಯುವ ಸಲುವಾಗಿ ಮೂರು ದಿನಗಳವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ ಎನ್ನಲಾಗಿದೆ.