ಚೆನ್ನೈ, ಎ.14 (Daijiworld News/MB) : ತಮಿಳುನಾಡಿನ ಕೊಯಮತ್ತೂರಿನಲ್ಲಿ 15 ವರ್ಷದ ಬಾಲಕಿ ಮೇಲೆ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಮಂದಿ 2016 ರಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಅತ್ಯಾಚಾರಗೈದ 10 ಜನರ ಪೈಕಿ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದು, ಉಳಿದ ಮೂವರ ಶೋಧ ಕಾರ್ಯ ನಡೆಯುತ್ತಿದೆ.
ಈ ಕಾಮುಕರು 2016 ರಿಂದಲ್ಲೇ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದು ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ವಿಷಯ ತಿಳಿದು ಬಂದಿದೆ.
ಬಾಲಕಿಯು ತನ್ನ ಸ್ನೇಹಿತನನ್ನು ಪ್ರೀತಿಸುತ್ತಿದ್ದು ಆತ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಮತ್ತೆ ಮೂವರು ಸ್ನೇಹಿತರು ಕೂಡಾ ಅತ್ಯಾಚಾರವೆಸಗಿದ್ದರು. ಇದಾದ ಆರು ತಿಂಗಳ ಬಳಿಕ ನೆರೆಹೊರೆಯ ಇತರ ಆರು ಹುಡುಗರು ಕೂಡಾ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿ ತಿಳಿಸಿದೆ.
ಸಂತ್ರಸ್ತೆಯ ಪೋಷಕರು ಕಟ್ಟಡ ಕಾರ್ಮಿಕರಾಗಿದ್ದು ಬಾಲಕಿ ಈ ವಿಷಯವನ್ನು ಅವರಿಗೆ ತಿಳಿಸಿರಲಿಲ್ಲ. ಆದರೆ ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಪೋಷಕರಿಗೆ ಈ ವಿಷಯ ತಿಳಿದು ಬಂದಿದ್ದು ಗರ್ಭಪಾತ ಮಾಡಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಕೊಯಮತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಏತನ್ಮಧ್ಯೆ ಬಾಲಕಿಯು ಶನಿವಾರ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು ಆಸ್ಪತ್ರೆಯ ಸಿಬ್ಬಂದಿಗಳು ಈ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಕೆಯನ್ನು ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಪೋಕ್ಸೋ ಕಾಯ್ದೆ ದಾಖಲು ಮಾಡಿ 7 ಆರೋಪಿಗಳನ್ನು ಬಂಧನ ಮಾಡಿದ್ದು ಮೂವರ ಶೋಧ ಕಾರ್ಯ ನಡೆಸುತ್ತಿದ್ದಾರೆ.