ದಾವಣಗೆರೆ, ಎ.15 (Daijiworld News/MB) : ರಾಜ್ಯ ಸರ್ಕಾರವು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ 31 ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆ, ಆರು ಸಾವಿರ ಐಸೊಲೇಶನ್ ವಾರ್ಡ್, 10 ಸಾವಿರದಷ್ಟು ಐಸೊಲೇಶನ್ ಬೆಡ್ ತಯಾರು ಮಾಡಿದೆ. 150 ವೆಂಟಿಲೇಟರ್ ಖರೀದಿ ಮಾಡುತ್ತಿದೆ. ಇನ್ನೂ ಅತೀ ಶೀಘ್ರವಾಗಿ 2 ನೇ ಹಂತದ ಕ್ವಾರಂಟೈನ್ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ರಾಜ್ಯದಲ್ಲಿ ಒಂದು ಲಕ್ಷದಷ್ಟು ಕೊರೊನಾ ಪ್ರಕರಣಗಳು ದೃಢಪಟ್ಟರು ಅದನ್ನು ಎದುರಿಸಲು ನಾವು ಶಕ್ತರು. ರಾಜ್ಯದಲ್ಲಿ 258 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಆ ಪೈಕಿ ದಾವಣಗೆರೆ ಜಿಲ್ಲೆಯ ಮೂರು ಪ್ರಕರಣ ಸೇರಿದಂತೆ 65 ಜನ ಚೇತರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಎಲ್ಲಾ ಕ್ರಮಗಳಿಂದಾಗಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ 12ನೇ ಸ್ಥಾನಕ್ಕಿಳಿದಿದೆ ಎಂದು ತಿಳಿಸಿದ್ದಾರೆ.
ಇನ್ನು ಲಾಕ್ಡೌನ್ ವಿಸ್ತರಣೆ ಮಾಡಿ ಪ್ರಧಾನಿ ಮೋದಿ ಮಾಡಿದ ಆದೇಶವನ್ನು ಎಲ್ಲರೂ ಸರಿಯಾಗಿ ಪಾಲಿಸಬೇಕು. ಮನೆಯಲ್ಲೇ ಇರಬೇಕು. ಸಪ್ತ ಸೂತ್ರಗಳನ್ನು ಪಾಲನೆ ಮಾಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಲಾಕ್ಡೌನ್ ಜಾರಿ ಇರುವ ಸಂದರ್ಭದಲ್ಲೇ ಯಾರಾದರು ಪ್ರವಾಸಕ್ಕೆ ಹೋಗುವುದು, ಮೋಜು ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.