ಬೆಂಗಳೂರು, ಏ 15 (Daijiworld News/MSP): ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷ ಜೂನ್ ನಲ್ಲಿ ಆರಂಭವಾಗುವುದಿಲ್ಲ, ಆಗಸ್ಟ್ ನಿಂದ ಪ್ರಾರಂಭವಾಗುತ್ತವೆ ಎಂಬ ವದಂತಿ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಈ ಕುರಿತ ಯಾವುದೇ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಮೇ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಬರುವುದು ಅನುಮಾನ, ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಇನ್ನು ಮೂರೂವರೆ ತಿಂಗಳು ಆರಂಭವಾಗುವುದಿಲ್ಲ, ಆಗಸ್ಟ್ ವೇಳೆ ಶಾಲಾ- ಕಾಲೇಜು ಆರಂಭವಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು ಈ ಕುರಿತಾಗಿ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ತೇರ್ಗಡೆ ಮಾಡುತ್ತಾರೆ, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸದಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸಲಹೆಗಳನ್ನು ನೀಡಿದೆ ಎಂಬ ಸುದ್ದಿಯೂ ಹರಿದಾಡಿತ್ತು.
ಈ ಬಗ್ಗೆ ಕೂಡಲೇ ಸಚಿವರು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕೆಲವು ಮಾಧ್ಯಮಗಳು ಇಂದೇ ಜಗತ್ತಿನ ಕಥೆ ಮುಗೀತು ಎಂಬ ಭಾವನೆ ತಂದರೆ, ಇನ್ನು ಕೆಲವು ಮಾಧ್ಯಮಗಳು ನಾಳೆಯೂ ಜಗತ್ತು ಮತ್ತು ನಾವು ಇರುತ್ತದೆ/ತ್ತೇವೆ ಎಂಬ ವಿಶ್ವಾಸ ತರುತ್ತವೆ ಎಂದು ಕೂಡ ಸಚಿವ ಸುರೇಶ್ ಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.