ರೋಹ್ಟಕ್, ಏ 15 (Daijiworld News/MSP): ಕರೋನವೈರಸ್ ಹರಡುವುದನ್ನು ತಡೆಯಲು ವಿಧಿಸಲಾಗಿ ಲಾಕ್ಡೌನ್ ಕಾರಣದಿಂದಾಗಿ, ವಿವಾಹವಾಗಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದ ಸ್ಥಳೀಯ ಯುವಕ ಹಾಗೂ ಮೆಕ್ಸಿಕನ್ ಯುವತಿಯ ವಿವಾಹಕ್ಕಾಗಿ ರೋಹ್ಟಕ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾತ್ರಿ ಎಂಟಕ್ಕೆ ಬಾಗಿಲು ತೆರೆದು ಇಬ್ಬರ ವಿವಾಹವನ್ನು ಸಂಪನ್ನಗೊಳಿಸಿದೆ.
2017 ರಲ್ಲಿ ಭಾಷಾ ಕಲಿಕೆಯ ಆಪ್ ಮೂಲಕ ಭೇಟಿಯಾದ ರೋಹ್ಟಕ್ನ ಸೂರ್ಯ ಕಾಲೋನಿ ಮೂಲದ ನಿರಂಜನ್ ಕಶ್ಯಪ್ ಹಾಗೂ ಮೆಕ್ಸಿಕನ್ ಮೂಲದ ಡಾನಾ ಜೋಹೆರಿ ಆಲಿವೆರೋಸ್ ಕ್ರೂಸ್ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಡಾನಾ ನಿರಂಜನ್ ಹುಟ್ಟುಹಬ್ಬಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ೨೦೧೮ ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ೨೦೨೦ರ ಫೆಬ್ರವರಿ 11 ರಂದು ಡಾನಾ ಮತ್ತು ಅವರ ತಾಯಿ ಮದುವೆಗಾಗಿ ಭಾರತಕ್ಕೆ ಬಂದು ಫೆಬ್ರವರಿ 17 ರಂದು ವಿಶೇಷ ಮದುವೆ ಕಾಯ್ದೆಯಡಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು.
"ವಿಶೇಷ ಮದುವೆ ಕಾಯ್ದೆಯಡಿ ಮದುವೆಗೆ ಅರ್ಜಿ ಸಲ್ಲಿಸಿದ್ದು, ಮಾರ್ಚ್ 18 ಕ್ಕೆ ೩೦ ದಿನಗಳ ನೋಟೀಸ್ ಅವಧಿಯನ್ನು ನಾವಿಬ್ಬರು ಪೂರೈಸಿದೆವು. ಆದರೆ ಅದೇ ವೇಳೆ ಲಾಕ್ ಡೌನ್ ಘೋಷಣೆಯಾದ್ದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ಡಾನಾ ಮೆಕ್ಸಿಕೋಗೆ ಹಿಂತಿರುಗಲು ಮಾರ್ಚ್ 24ರ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ್ದರಿಂದ ಮೇ 5 ಕ್ಕೆ ಟಿಕೆಟ್ ಕಾಯ್ದಿರಿಸಿದ್ದಾರೆ ಎನ್ನುತ್ತಾರೆ ನಿರಂಜನ್.
ಇನ್ನು ತಮ್ಮ ಪ್ರೀತಿಯ ಬಗ್ಗೆ ವಿವರಿಸಿರುವ ಡಾನಾ, ನಾನು ನಿರಂಜನ್ ರನ್ನು 2017 ರಲ್ಲಿ ಭೇಟಿಯಾಗಲು ಭಾರತಕ್ಕೆ ಬಂದಿದ್ದೆ. ಆ ಬಳಿಕ ನಾವಿಬ್ಬರು 2018 ರ ಡಿಸೆಂಬರ್ ನಿಶ್ಚಿತಾರ್ಥ ಮಾಡಿಕೊಂಡು ನಾನು ನನ್ನ ದೇಶಕ್ಕೆ ಹಿಂತಿರುಗಿದೆ. ಇದೀಗ ನಾನು ಎರಡು ವರ್ಷಗಳನ್ನು ಕಳೆದಿದ್ದೇನೆ. ಲಾಕ್ ಡೌನ್ ಕಾರಣ, ನಮಗೆ ಮದುವೆಯಾಗಲು ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ನಮಗೆ ಮದುವೆಯಾಗಲು ಸಹಾಯ ಮಾಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
"ಮೆಕ್ಸಿಲ್ ಮೂಲದ ಯುವತಿ ಭಾರತಕ್ಕೆ ಬಂದಿರುವುದರಿಂದ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಬಹುದು. ಈ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದ್ದೇವೆ. ಜಿಲ್ಲಾಧಿಕಾರಿಗಳು ಮೆಕ್ಸಿಕನ್ ರಾಯಭಾರ ಕಚೇರಿಗೆ ಮನವಿ ಹಾಗೂ ದಾಖಲಾತಿ ಸಲ್ಲಿಸಿ ಅಲ್ಲಿಂದ ನಿರಾಪೇಕ್ಷಣಾ ಪ್ರಮಾಣಪತ್ರ ತಲುಪಿದ ಬಳಿಕ ಜಿಲ್ಲಾಧಿಕಾರಿ ನ್ಯಾಯಾಲಯವನ್ನು ತೆರೆದು ಏಪ್ರಿಲ್ 13 ರಂದು ರಾತ್ರಿ 8 ಗಂಟೆಗೆ ವಿವಾಹವನ್ನು ನಡೆಸಿಕೊಟ್ಟಿದ್ದಾರೆ ಎಂದು ದಂಪತಿಗಳಿಗೆ ಮದುವೆಯಾಗಲು ಸಹಾಯ ಮಾಡಿದ ವಕೀಲರು ವಿವರಿಸಿದ್ದಾರೆ.