ಧಾರವಾಡ, ಎ.15 (DaijiworldNews/PY) : ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಜಿಲ್ಲಾಡಳಿತವು ಮಾನವೀಯತೆ ಹಿನ್ನಲೆ ತುರ್ತು ವೈದ್ಯಕೀಯ ತಪಾಸಣೆಗಾಗಿ ಅಗತ್ಯವಿರುವವರಿಗೆ ಪಾಸ್ ನೀಡುವ ಸೌಲಭ್ಯವನ್ನು ನೀಡಿದೆ. ಆದರೆ, ಈ ಪಾಸ್ ಪಡೆದು ದುರುಪಯೋಗ ಮಾಡಿ ಮದುವೆ ಕಾರ್ಯ ಮುಗಿಸಿ ಬಂದಿದ್ದು ಈ ವಾಹನವನ್ನು ಬುಧವಾರ ಬೆಳಿಗ್ಗೆ 8:30 ಗೆ ನರೇಂದ್ರ ಗ್ರಾಮದಲ್ಲಿ ಡಿವೈಎಸ್ಪಿ ರವಿನಾಯಕ್ ರೌಂಡ್ಸ್ನಲ್ಲಿದ್ದ ಸಂದರ್ಭ ಜಪ್ತಿ ಮಾಡಿದ್ದಾರೆ.
ವಧುವಿನ ಕಡೆಯವರು ಪಾಸ್ ದುರುಪಯೋಗ ಪಡಿಸಿಕೊಂಡಿದ್ದು, ಅವರು ಉಪ್ಪಿನ ಬೇಟಗೇರಿ ಗ್ರಾಮದವರೆಂದು ತಿಳಿಸಿದ್ದಾರೆ. ಹುಬ್ಬಳ್ಳಿಯಿಂದ ಇನೋವಾ ಕಾರಿನಲ್ಲಿ 9 ಜನರು ವಿವಾಹ ಕಾರ್ಯ ಮುಗಿಸಿಕೊಂಡು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಚೆಕ್ಪೋಸ್ಟ್ಗಳನ್ನು ತಪ್ಪಿಸಿಕೊಂಡು ಮುಂದೆ ಸಾಗಿದ್ದರು. ಈ ಸಂದರ್ಭ ಡಿವೈಎಸ್ಪಿ ಕಾರು ನಿಲ್ಲಿಸಿ ಜಪ್ತಿ ನಡೆಸಿದ ಸಂದರ್ಭ ಪಾಸ್ ದುರುಪಯೋಗಪಡಿಸಿಕೊಂಡಿದ್ದು ತಿಳಿದು ಬಂದಿದೆ.
ತಕ್ಷಣವೇ ಡಿವೈಎಸ್ಪಿ ರವಿನಾಯಕ್ ಅವರು ಎಸ್ಪಿ ವರ್ತಿಕಾ ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾಗಿದ್ದು, ಇನೋವಾ ವಾಹನದಲ್ಲಿದ್ದ 9 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ರವಾನಿದ್ದಾರೆ. ಬಳಿಕ 9 ಜನರಿಗೆ ಹೋಂಕ್ವಾರಂಟೈನ್ನಲ್ಲಿರಲು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಡಳಿತವು ಅಗತ್ಯ ಹಾಗೂ ತುರ್ತು ನೆರವಿಗಾಗಿ ನೀಡಿದ ಪಾಸ್ಗಳನ್ನು ದುರುಪಯೋಗಪಡಿಸಿಕೊಂಡರೆ ಅಂತವರ ವಾಹನಗಳನ್ನು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಲಾಗುವುದು. ಅಲ್ಲದೇ, ಸರ್ಕಾರದ ಆದೇಶ ಉಲ್ಲಂಘನೆ ಮಾಡಿದವರ ವಿರುದ್ದ ಐಪಿಸಿ ಸೆಕ್ಷನ್ 188ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಲಾಕ್ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ರಸ್ತೆಗಿಳಿದ ಒಂದು ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಜಿಲ್ಲಾಡಳಿತ ಅಥವಾ ಯಾವುದೇ ಇತರ ಇಲಾಖೆಗಳು ಅಗತ್ಯ ಸೇವೆಗಾಗಿ ನೀಡುವ ಪಾಸ್ಗಳನ್ನು ದುರುಪಯೋಗ ಮಾಡಿದ್ದಲ್ಲಿ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.