ನವದೆಹಲಿ, ಏ 15 (Daijiworld News/MSP): ಈ ವರ್ಷ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಲಿದ್ದು, ಜೂನ್ ಆರಂಭದಲ್ಲಿ ಕೇರಳ ಮೂಲಕ ಭಾರತ ಪ್ರವೇಶಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.
ಭಾರತದ ಹವಾಮಾನ ಇಲಾಖೆ ಪ್ರಕಾರ ಈ ಬಾರಿಯ ಮುಂಗಾರು ದೀರ್ಘಾವಧಿಯ ಸರಾಸರಿ (ಎಲ್ಪಿಎ) ಶೇಕಡಾ 100 ರಷ್ಟು ಸುರಿಯುವ ಸಾಧ್ಯತೆ ಇದ್ದು. ಅದು 'ಸಾಮಾನ್ಯ' ವಿಭಾಗದಲ್ಲಿ ಬರಲಿದೆ ಎಂದಿದ್ದಾರೆ.
ಭಾರತದಲ್ಲಿ ಶೇ. 70 ಮಳೆ ಮುಂಗಾರಿನ ಹಂಗಾಮಿನಲ್ಲಿಯೇ ಸುರಿಯಲಿದೆ. 4 ತಿಂಗಳ ಮುಂಗಾರು ಮಳೆ ಸಾಮಾನ್ಯವಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಹೇಳಿದ್ದಾರೆ.
ಜೂನ್ 1 ರಂದು ಮುಂಗಾರು ಕೇರಳ ಪ್ರವೇಶಿಸಲಿದ್ದು, ಚೆನ್ನೈಗೆ 4 ರಂದು , ಪುಣೆ ಗೆ 10 ಹಾಗೂ ಮುಂಬೈಗೆ 11 ರಂದು ಹಾಗೂ ದೆಹಲಿಗೆ ಜೂನ್ 27 ರಂದು ಮುಂಗಾರು ಮಾರುತಗಳು ಪ್ರವೇಶ ಪಡೆಯಲಿದೆ. ಈ ವರ್ಷದಿಂದ ಮಾನ್ಸೂನ್ ಪ್ರಾರಂಭ ಮತ್ತು ವಾಪಸಾತಿ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ. ಆದಾಗ್ಯೂ, ಜೂನ್ 1 ರಂದು ಕೇರಳದಲ್ಲಿ ಮುಂಗಾರು ಪ್ರಾರಂಭವಾಗಲಿದೆ. ಪ್ರಾರಂಭದ ದಿನಾಂಕದಲ್ಲಿ ಬದಲಾವಣೆಯಾಗಿಲ್ಲ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.