ಮುಂಬೈ, ಎ.15 (Daijiworld News/MB) : ತಮ್ಮ ಊರಿಗೆ ಹೋಗಲು ಮಹಾರಾಷ್ಟ್ರದಲ್ಲಿರುವ ವಲಸೆ ಕಾರ್ಮಿಕರಿಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಸುದ್ದಿವಾಹಿನಿಯ ಪತ್ರಕರ್ತ ವರದಿ ಮಾಡಿದ್ದು ಆತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ಪರ್ತಕರ್ತ ರಾಹುಲ್ ಕುಲಕರ್ಣಿ ಮೊದಲ ಲಾಕ್ಡೌನ್ ಮುಗಿದ ಕೂಡಲೇ ಜನ್ ಸಧರಣ್ ವಿಶೇಷ ರೈಲು ಪ್ರಾರಂಭವಾಗಲಿದೆ ಎಂದು ವರದಿ ಮಾಡಿದ್ದು ಈ ಕಾರಣದಿಂದಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಮಂಗಳವಾರ ಬಾಂದ್ರಾ ಸ್ಟೇಷನ್ನಲ್ಲಿ ಬಂದು ಸೇರಿದ್ದರು. ಅಲ್ಲಿಯೇ ಪ್ರತಿಭಟನೆ ಕೂಡಾ ಮಾಡಿದ್ದರು.
ಇದೀಗ ಈ ಪರ್ತಕರ್ತನ ಮೇಲೆ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಾಧಿಕಾರಿಯ ಆದೇಶ ಉಲ್ಲಂಘನೆ), 269, 270 (ನಿರ್ಲಕ್ಷ್ಯ, ಪ್ರಾಣ ಹಾನಿಯುಂಟಾಗುವಂತ ಸೋಂಕು ಹರಡುವಿಕೆಗೆ ಕಾರಣವಾಗುವ ಕೃತ್ಯ), 117 (ಸಾರ್ವಜನಿಕರಿಗೆ ಕೆಟ್ಟ ಕೆಲಸಕ್ಕೆ ನೆರವಾಗುವುದು) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದು ವಶಕ್ಕೆ ಪಡೆದಿದ್ದಾರೆ. ಈ ಪತ್ರಕರ್ತನನ್ನು ಮುಂಬೈಗೆ ಕರೆತರುವ ಕಾರ್ಯ ನಡೆಯುತ್ತಿದೆ.