ಕೊಡಗು, ಏ 15 (Daijiworld News/MSP): ಕೊರೊನಾ ವೈರಸ್ನಿಂದ ಕೊಡಗು ಜಿಲ್ಲೆ ಸದ್ಯ ಮುಕ್ತವಾಗಿದೆ ಎಂದು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಗುಣಮುಖ ಸೋಂಕಿತ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಗುಣಮುಖ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಅವರನ್ನ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ.
35 ವರ್ಷದ ವ್ಯಕ್ತಿ ದುಬೈನಿಂದ ವಾಪಸ್ಸಾಗಿದ್ದರು, ಮಾರ್ಚ್ 19ರಂದು ಕೊರೊನಾ ಸೋಂಕಿರುವುದು ಪತ್ತೆಯಾಗಿತ್ತು. ಅವರನ್ನ 22 ದಿನಗಳ ಕಾಲ ಐಸೋಲೇಷನ್ನಲ್ಲಿ ಇರಿಸಲಾಗಿತ್ತು, ನೆಗೆಟಿವ್ ವರದಿ ಬಂದ ಹಿನ್ನೆಲೆ ಏಪ್ರಿಲ್ 11 ರಂದು ಡಿಸ್ಚಾರ್ಜ್ ಮಾಡಲಾಗಿತ್ತು.
ಇದೀಗ ಮತ್ತೆ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವ್ಯಕ್ತಿಯ ಗಂಟಲು ದ್ರವವನ್ನ ಲ್ಯಾಬ್ಗೆ ಕಳುಹಿಸಿದ್ದು ಇಂದು ಅಥವಾ ನಾಳೆ ವರದಿ ಬರುವ ನಿರೀಕ್ಷೆ ಇದೆ ವೈದ್ಯಕೀಯ ವರದಿ ಬಂದ ಬಳಿಕ ವಿಷಯ ಸ್ಪಷ್ಟವಾಗಲಿದೆ. ಜನತೆ ಆತಂಕ ಪಡುವುದು ಬೇಡ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.