ನವದೆಹಲಿ, ಎ.15 (DaijiworldNews/PY) : ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಪಾಲಿಸಬೇಕು. ರಾಜ್ಯ ಸರ್ಕಾರಗಳು ಎರಡನೇ ಹಂತದ ಲಾಕ್ಡೌನ್ಗೆ ಸಂಬಂಧಿಸಿ ನೀಡಲಾಗಿರುವ ಮಾರ್ಗಸೂಚಿಯನ್ನು ದುರ್ಬಲಗೊಳಿಸುವಂತಿಲ್ಲ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.
ಕೆಲವೇ ಕೆಲವು ವಿನಾಯಿತಿಗಳನ್ನು ಗ್ರಾಮೀಣ, ಕೃಷಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಮಾತ್ರ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ನೀಡಲಾಗಿರುವ ಮಾರ್ಗಸೂಚಿಯನ್ನು ದುರ್ಬಲಗೊಳಿಸುವಂತಿಲ್ಲ. ಮಾರ್ಗಸೂಚಿಯಲ್ಲಿ ಏನು ಹೇಳಲಾಗಿದೆಯೋ ಅದನ್ನು ಜಾರಿಗೊಳಿಸಬೇಕು. ಅದಾಗಿಯೂ ರಾಜ್ಯ ಸರ್ಕಾರಗಳು ಪ್ರಾದೇಶಿಕ ಆದ್ಯತೆಗಳಿಗೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.
ಕೊರೊನಾ ಹಾಟ್ಸ್ಪಾಟ್ ಪ್ರದೇಶಗಳಿಗೆ ಎ.20ರ ನಂತರ ನೀಡಲಾಗಿರುವ ವಿನಾಯಿತಿಗಳು ಅನ್ವಯವಾಗುವುದಿಲ್ಲ. ಇಂತಹ ಪ್ರದೇಶಗಳಿಗೆ ಯಾವುದೇ ತಪಾಸಣೆ ಇಲ್ಲದೇ ಯಾರೂ ಒಳ ಬರುವುದು, ಹೊರ ಹೋಗುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಮದ್ಯ ಮಾರಾಟವನ್ನು ಕೆಲವು ರಾಜ್ಯಗಳು ಪುನರಾರಂಭ ಮಾಡಿವೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು ಮಾರಾಟಕ್ಕೆ ಅನುಮತಿ ನೀಡಲು ಚಿಂತನೆ ನಡೆಸಿವೆ ಎಂಬ ವರದಿಗಳ ಬೆನ್ನಲ್ಲೇ, ಮದ್ಯ ಮಾರಾಟವನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಹೇಳಿದೆ.
ಮೊದಲ ಹಂತದಲ್ಲಿ ಲಾಕ್ಡೌನ್ ಸಾಧಿಸಿರುವ ನಿಯಂತ್ರಣವನ್ನು ಹಾಗೆಯೇ ಮುಂದುವರೆಸಬೇಕು. ಕೊರೊನಾ ವ್ಯಾಪಿಸುವುದನ್ನು ಇನ್ನಷ್ಟು ನಿಯಂತ್ರಣ ಮಾಡುವುದು, ದಿನಗೂಲಿ ಕಾರ್ಮಿಕರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಸ್ವಲ್ಪ ವಿನಾಯಿತಿ ನೀಡುವುದು ಪರಿಷ್ಕೃತ ಮಾರ್ಗಸೂಚಿಯ ಉದ್ದೇಶವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.