ಬೆಂಗಳೂರು, ಎ.16 (Daijiworld News/MB) : ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರ ತಂಡ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರನ್ನು ಭೂಗತ ಪಾತಕಿ ರವಿ ಪೂಜಾರಿ ನಡೆಸಿದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿದೆ.
ರವಿ ಪೂಜಾರಿ ಭಾಗಿಯಾದ ಕೆಲವು ಪ್ರಕರಣಗಳಲ್ಲಿ ರೈ ಅವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ಆಧಿಕಾರಿಗಳ ತಂಡ ರೈ ಅವರಿಗೆ ಅನಾರೋಗ್ಯ ಇರುವ ಕಾರಣದಿಂದಾಗಿ ಅವರ ಮನೆಗೆ ಹೋಗಿ ಸುಮಾರು ಎರಡು ಗಂಟೆಗಳ ಕಾಲು ವಿಚಾರಣೆ ನಡೆಸಿದ್ದು ರೈ ಅವರು ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರವಿ ಪೂಜಾರಿ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಪ್ರಕರಣಗಳಿದ್ದು ಇತ್ತೀಚೆಗೆ ರಾಜ್ಯ ಪೊಲೀಸರ ತಂಡ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನಗಲ್ನಲ್ಲಿ ವಶಕ್ಕೆ ಪಡೆದಿದೆ. ಇನ್ನು ರವಿ ಪೂಜಾರಿ ಭೂಗತ ಪಾತಕಿಗಳಾದ ಛೋಟಾ ರಾಜನ್, ದಾವೂದ್ ಇಬ್ರಾಹಿಂ ತಂಡದಲ್ಲೂ ಗುರುತಿಸಿಕೊಂಡಿದ್ದು ರವಿ ಪೂಜಾರಿ ವಿರುದ್ಧ ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗಣ್ಯರಿಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಮಾಡಿದ ಪ್ರಕರಣಗಳು ದಾಖಲಾಗಿದೆ.