ನವದೆಹಲಿ, ಎ.16 (Daijiworld News/MB) : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 941 ಹೊಸ ಪ್ರಕರಣಗಳು ದಾಖಲಾಗಿದ್ದು 37 ಮಂದಿ ಮೃತಪಟ್ಟಿದ್ದಾರೆ. ಗುರುವಾರ ಬೆಳಿಗ್ಗೆ 8 ರ ವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 12,380 ಏರಿಕೆಯಾಗಿದ್ದು 414 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. 1,488 ಜನ ಗುಣಮುಖರಾಗಿದ್ದಾರೆ.
ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2,916 ಕ್ಕೇರಿದ್ದು 187 ಮಂದಿ ಅಸುನೀಗಿದ್ದಾರೆ. ದೆಹಲಿಯಲ್ಲಿ 1,578 ಪ್ರಕರಣಗಳು ದೃಢಪಟ್ಟಿದ್ದು 32 ಮಂದಿ ಮೃತರಾಗಿದ್ದಾರೆ.
ತಮಿಳುನಾಡಿನಲ್ಲಿ 1,242 ಜನರಿಗೆ ಸೋಂಕು ತಗುಲಿದ್ದು 14 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 279 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 12 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ 1,023, ಮಧ್ಯಪ್ರದೇಶದಲ್ಲಿ 987 ಪ್ರಕರಣಗಳು, ರಾಜಸ್ತಾನದಲ್ಲಿ 1023, ಕೇರಳದಲ್ಲಿ 388 ಪ್ರಕರಣಗಳು ದಾಖಲಾಗಿದೆ. ಈ ಪೈಕಿ 218 ಜನರು ಗುಣಮುಖರಾಗಿದ್ದಾರೆ.