ನವದೆಹಲಿ, ಎ.16 (Daijiworld News/MB) : ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿರುವ ನಡುವೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುವ 19 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿದ್ದು ಇದೀಗ 72 ಕುಟುಂಬಗಳನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಈ ಯುವಕನಿಗೆ ಯಾವುದೇ ಪ್ರವಾಸದ ಇತಿಹಾಸವಿಲ್ಲ. ಸೋಂಕು ಪೀಡಿತ ಮನೆಗೆ ಪಿಜ್ಜಾ ಡೆಲಿವರಿ ಮಾಡಿದ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಕುರಿತಾಗಿ ಜೋಮಾಟೊ ಪ್ರಕಟನೆ ನೀಡಿದ್ದು, ಉದ್ಯೋಗಿಗೆ ಕೊರೊನಾ ದೃಢಪಟ್ಟಿರುವುದು ತಿಳಿದು ಬಂದಿದೆ. ಮಾಲ್ವಿಯಾ ನಗರದ ಕೆಲವು ಗ್ರಾಹಕರಿಗೆ ಪಿಜ್ಜಾ ಡೆಲಿವರಿ ಮಾಡಿದ್ದಾನೆ. ಹಾಗೆಯೇ ಈತ ಡೆಲಿವರಿ ಮಾಡುವ ವೇಳೆ ಸೋಂಕು ತಗುಲಿದೆಯೆ ಎಂದು ಖಚಿತವಾಗಿಲ್ಲ ಎಂದು ತಿಳಿಸಿದೆ.
ಕಳೆದ 15 ದಿನಗಳ ಕಾಲ ಈ ಯುವಕ ದಕ್ಷಿಣ ದಿಲ್ಲಿಯ ಹೌಝ್ ಖಾಸ್, ಮಾಲ್ವಿಯಾ ನಗರ್ ಮತ್ತು ಸಾವಿತ್ರಿ ನಗರದ 70ಕ್ಕೂ ಅಧಿಕ ಮನೆಗಳಿಗೆ ಪಿಜ್ಜಾ ಸರಬರಾಜು ಮಾಡಿರುವ ಈ ಯುವಕ ಏಪ್ರಿಲ್ 12 ಕ್ಕೆ ಕೊನೆಯ ಬಾರಿಗೆ ಡೆಲಿವರಿ ಮಾಡಿದ್ದು ಇದೀಗ ಕೊರೊನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವಕನಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಆತ ಪಿಜ್ಜಾ ಡೆಲಿವರಿ ಮಾಡಿದ 70ಕ್ಕೂ ಅಧಿಕ ಕುಟುಂಬದ ಸದಸ್ಯರನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ಅವರನ್ನು ಪ್ರತಿದಿನ ತಪಾಸಣೆ ಮಾಡಲಾಗುತ್ತಿದೆ. ಹಾಗೆಯೇ ಇವನ ಸಂಪರ್ಕಕ್ಕೆ ಬಂದಿದ್ದ 20ಕ್ಕೂ ಅಧಿಕ ಹುಡುಗರನ್ನೂ ಕೂಡಾ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.