ಹಾಸನ, ಏ15 (Daijiworld News/MSP): ಕೋವಿಡ್-19 ನಿಯಂತ್ರಣಾ ಕ್ರಮವಾಗಿ ಏ. 20 ರ ನಂತರ ಮನೆಯಿಂದ ಹೊರಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಈ ಬಗ್ಗೆ ಸರ್ಕಾರ ಆದೇಶ ಹೊಡಿಸಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಾತ್ರವಲ್ಲದೆ ಸಾರ್ವಜನಿಕರು ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಏ.20 ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರಲ್ಲದೆ, ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಅಥವಾ ಕರವಸ್ತ್ರ, ಟವೆಲ್, ದುಪ್ಪಟ್ಟಗಳಿಂದ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಅಗತ್ಯವಿದ್ದಾಗ ರಸ್ತೆಗೆ ಬರಬೇಕು ಎಂದು ಹೇಳಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಕಾರ್ಯಗಳನ್ನು ನಡೆಸಲು ಅವಕಾಶವಿದೆ ಆದರೆ ಮೈಮರೆತು ನಿಯಮ ಉಲ್ಲಂಘಿಸಿದರೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಸಾಮಾಜಿಕ ಅನಾರೋಗ್ಯ ತಲೆ ದೂರುತ್ತದೆ ಹಾಗಾಗಿ ಎಚ್ಚರಿಕೆಯಿಂದಿರಬೇಕಿದೆ.
ಕೊವೀಡ್-19 ತಡೆಗಟ್ಟಲು ರಾಜ್ಯ ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಅನುಸರಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ದಾನಿಗಳನ್ನು ಹುಡುಕಿ ಕೊರೋನಾ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಅಗತ್ಯ ನೆರವು ಪಡೆಯಲು ತಿಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಗತ್ಯ ಕೆಲಸವಿದ್ದಲ್ಲಿ ಮನೆಯಿಂದ ಒಬ್ಬರು ಮಾತ್ರ ಆಚೆ ಬರುವಂತೆ ನಿಯಮ ಮಾಡಲಾಗುವುದು ಎಂದ ಸಚಿವ ಮಾಧುಸ್ವಾಮಿ ಅವರು ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದೂವರೆ ಲಕ್ಷ ಮಾಸ್ಕ್ ಗಳನ್ನು ತಯಾರಿಸಲು ಯೋಜನೆ ರೂಪಿಸಿದ್ದು, ದಾನಿಗಳು ಸ್ವಯಂ ಸೇವಾ ಸಂಸ್ಥೆಗಳಡಿ ನೆರವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ
ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಬೆಳೆ ನೀಡಲಾಗುತ್ತದೆ, ಆನ್ ಲೈನ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಮೂಲಕ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗುವುದು ಆ ಮೂಲಕ ಸಾರ್ವಜನಿಕರು ರಸ್ತೆಗೆ ಬರುವುದನ್ನು ನಿಯಂತ್ರಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.
ಸಾಮಾನ್ಯ ಜ್ವರ, ಕೆಮ್ಮು ಇದ್ದವರೆಲ್ಲ ಕೊರೋನಾ ಸೋಂಕಿತರೆಂದು ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆಗಾಗಿ ಆ ಲಕ್ಷಣಗಳು ಕಂಡುಬಂದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರಲ್ಲದೆ, ರಾಜ್ಯದಲ್ಲಿ ಕೊರೋನಾ ತಪಾಸಣಾ ಪ್ರಯೋಗಾಲಯಗಳನ್ನು 50 ಕ್ಕೆ ಏರಿಸಲಾಗಿದೆ ಎಂದು ಅವರು ಹೇಳಿದರು.
ಸರಕು ಸಾಮಾನುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಹಾಸನ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಇಲ್ಲದ್ದರಿಂದ ಏ.20ರ ನಂತರದಲ್ಲಿ ಕೃಷಿ, ಕಾಫಿ ತೋಟದ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ ಆದರೆ ಹೋಟೆಲ್, ಸಾರ್ವಜನಿಕ ಸಾರಿಗೆ, ಚಿತ್ರಮಂದಿರ, ಸೂಪರ್ ಮಾರ್ಕೆಟ್ ಗಳಂತಹ ಜನ ಸೇರುವ ಸ್ಥಳಗಳನ್ನು ತೆಗೆಯಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡೆಸಿದ್ದಾರೆ.