ಬೆಂಗಳೂರು, ಎ.16 (DaijiworldNews/PY) : ಸಮಾಜ ಇಲಾಖೆಯ ವ್ಯಾಪ್ತಿಯ 92 ವಸತಿ ಶಾಲೆಗಳಲ್ಲಿ ಹಾಗೂ ನಿಲಯಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ಡೌನ್ನಿಂದ ಬಾದಿತರಾದವರಿಗೆ, ನಿರಾಶ್ರಿತರಿಗೆ, ಅಲೆಮಾರಿ ಜನಾಂಗದವರಿಗೆ, ಅಸಂಘಟಿತ ಕೂಲಿ ಕಾರ್ಮಿಕರಿಗೆ ಹಾಗೂ ಆಶ್ರಯ ಕೋರಿ ಬಂದ ಒಟ್ಟು 5,108 ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದರು.
ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯದಲ್ಲಿರುವವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು ೯೮ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಸಿಎಂ ಬಿಎಸ್ವೈ ಅವರು ರಾಜ್ಯದಲ್ಲಿ ಅನ್ನ, ನೀರು ಸಿಗದೇ ಯಾರೂ ಬಳಲಬಾರದು ಎಂದು ಹೇಳಿದ್ದು, ಆ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯು ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ವಸತಿ ನಿಲಯಗಳ ಆಶ್ರಯದಲ್ಲಿದ್ದವರಿಗೆ ಪ್ರತಿದಿನ ತಿಂಡಿ, ಊಟೋಪಚಾರ ನೀಡಿ ಆರೈಕೆ ಮಾಡಲಾಗುತ್ತಿದೆ. ಸಾಬೂನು ಸೇರಿದಂತೆ ಸೂಕ್ತ ವಸತಿ, ಸ್ನಾನಗೃಹ ಸೌಲಭ್ಯ ಒದಗಿಸಿ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ತೊಂದರೆಗೊಳದ ಯಾವುದೇ ಅಂಘಟಿತ ಕಾರ್ಮಿಕರು, ಬೇರೆ ಸ್ಥಳಗಳಿಂದ ಬಂದವರು ಆಶ್ರಯ ಬೇಕಾದರೆ ಅಥವಾ ಯಾವುದೇ ತೊಂದರೆಗಳಿದ್ದರೂ ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗಲಿದೆ. ವೈದ್ಯಕೀಯ ತಂಡವು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಾಲೂಕು ವೈದ್ಯಾಧಿಕಾರಿಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿಕೊಂಡು ಇವರ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ, ಈ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.