ಬೆಂಗಳೂರು, ಎ.16 (Daijiworld News/MB) : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದ್ದು ಬುಧವಾರ ಸಂಜೆ 5 ಗಂಟೆಯ ಬಳಿಕ ಈವರೆಗೆ 34 ಹೊಸ ಸೋಂಕು ಪತ್ತೆಯಾಗಿದೆ. ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13ಕ್ಕೇರಿದೆ.
ಈ 34 ಸೋಂಕಿತರ ಪೈಕಿ 17 ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲೇ ದೃಢಪಟ್ಟಿದ್ದು ಉಳಿದಂತೆ ವಿಜಯಪುರದಲ್ಲಿ ಏಳು ಪ್ರಕರಣಗಳು, ಬೆಂಗಳೂರು ನಗರದಲ್ಲಿ ಐದು ಪ್ರಕರಣಗಳು ದೃಢಪಟ್ಟಿದೆ. ಕೊರೊನಾಗೆ ಬಲಿಯಾದವರ ಸಂಖ್ಯೆಯು 13ಕ್ಕೇರಿದೆ. ಒಟ್ಟು 313 ಸೋಂಕಿತರ ಪೈಕಿ 82 ಸೋಂಕಿತರು ಗುಣಮುಖರಾಗಿದ್ದಾರೆ.
ಬೆಳಗಾವಿಯ ಹಿರೆಬಾಗೆವಾಡಿಯ ಐವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರು ಹಾಗೂ ಬಾಗೆವಾಡಿಯ ಓರ್ವ ಮಹಿಳೆಗೆ ಸೋಂಕಿತರ ಸಂಪರ್ಕದಲ್ಲಿದ್ದು ಇದೀಗ ಇವರಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ.
ವಿಜಯಪುರದಲ್ಲಿ 12 ವರ್ಷದ ಬಾಲಕ, ಒಂದುವರೆ ವರ್ಷದ ಮಗು ಸೇರಿದಂತೆ ಆರು ಜನರಲ್ಲಿ ಸೋಂಕು ಪತ್ತೆಯಾಗಿದ್ದು ಮೈಸೂರಿನಲ್ಲಿ ಮೂವರು ಫಾರ್ಮ ಕಂಪನಿ ಉದ್ಯೋಗಿಗಳಿಗೆ ಸೋಂಕು ಖಚಿತವಾಗಿದೆ. ಗದಗ ಮತ್ತು ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಹಾಗೆಯೇ ದೆಹಲಿಗೆ ಪ್ರಯಾಣ ಮಾಡಿದ್ದವರ ಮರು ಪರೀಕ್ಷೆ ಮಾಡಲಾಗಿದ್ದು ಚಿಕ್ಕೋಡಿ, ಬೆಳಗಾವಿಯ ತಲಾ ಓರ್ವರು, ರಾಯಬಾಗದ ಮೂವರ ಕೊರೊನಾ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಇನ್ನು ರಾಯಬಾಗದಲ್ಲಿ ನೆಲೆಸಿರುವ ಮೂವರು ಅನ್ಯ ರಾಜ್ಯದ ಪ್ರಜೆಗಳಿಗೆ ಸೋಂಕು ದೃಡಪಟ್ಟಿದೆ.