ಬೆಂಗಳೂರು, ಎ.16 (DaijiworldNews/PY) : ಮುಖ್ಯಮಂತ್ರಿಗಳೊಂದಿಗೆ ಮುಂದಿನ 30 ವರ್ಷಗಳ ನೀರಾವರಿ ಅನುಷ್ಠಾನದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಚರ್ಚೆ ನಡೆಸುವುದಾಗಿ ಜಲಸಂಪನ್ಮೂಲ ಸಚಿವ ಹೇಳಿದ್ದಾರೆ.
ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕ್ಯಾ. ರಾಜಾರಾವ್ ಅವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದ ಅವರು, ನೀರಿನ ಸದ್ಬಳಕೆಗೆ ಅಂತರಾಜ್ಯ ನದಿ ಜೋಡಣೆ ಮಾಡಬೇಕಾದ ಅವಶ್ಯಕತೆಯಿದೆ. ರಾಜ್ಯದ ನೀರು ಪಾಲು ಕೂಡಾ ಇದರಿಂದ ಅಧಿಕವಾಗಲಿದೆ. ಹಾಗಾಗಿ, ಈ ಕುರಿತು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಅತಿವೃಷ್ಠಿ ನಿಯಂತ್ರಣಕ್ಕೆ ವ್ಯಾಪಕ ಕ್ರಮ ತೆಗೆದುಕೊಳ್ಳಲಾಗಿದೆ. ನಮ್ಮ ನೀರನ್ನು ಉಳಿಸಿಕೊಂಡು ಯೋಜನೆಗಳನ್ನು ಆರಂಭಿಸುತ್ತೇವೆ. ಕುಡಿಯುವ ನೀರು, ಅಂತರ್ಜಲ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನೀರಿನ ಬಳಕೆ ಕುರಿತಂತೆ ದೂರದೃಷ್ಟಿಯ ನೀಲಕ್ಷೆಯನ್ನು ಸಿದ್ದಪಡಿಸಲಾಗುವುದು ಎಂದರು.
ಕೇಂದ್ರ ಸರ್ಕಾರಕ್ಕೆ ಕೃಷ್ಣ ನದಿ ನೀರಿನ ಸದ್ಬಳಕೆಗಾಗಿ ತಕ್ಷಣವೇ ಅಧಿಸೂಚನೆ ಹೊರಡಿಸಲು ಮನವಿ ಮಾಡಲಾಗಿದೆ. ಹನಿ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ವಿಸ್ತೃತ ನೀತಿ ರೂಪಿಸುತ್ತೇವೆ. ಸರ್ಕಾರ ದೊಡ್ಡ ಮಟ್ಟದ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಬೇಕಾಗಿದ್ದು, ಈ ಬಗ್ಗೆ ಇಲಾಖೆಯ ಮಟ್ಟದಲ್ಲಿ ಚರ್ಚೆ ನಡೆಸಿ ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ನವದೆಹಲಿಗೆ ತೆರಳಿ ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಈ ವಿಚಾರವಾಗಿ ಮಾತನಾಡಿ ತಕ್ಷಣವೇ ಅಧಿಸೂಚನೆ ಹೊರಡಿಸಲು ಮನವಿ ಮಾಡುವುದಾಗಿ ಹೇಳಿದರು.