ನವದೆಹಲಿ, ಎ.16 (Daijiworld News/MB) : ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಕೊನೆಯಲ್ಲ. ಅದರಿಂದ ವೈರಸ್ನ್ನು ನಾಶ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಸಮಯದವರೆಗೆ ಹರಡುವುದನ್ನು ತಡೆಯಬಹುದಷ್ಟೇ. ಈ ಸಂದರ್ಭದಲ್ಲಿ ದೇಶದ ಸ್ಥಿತಿಗತಿ ತಿಳಿಯುವುದು ಮುಖ್ಯ. ಅದಕ್ಕಾಗಿ ಕೊರೊನಾ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪ್ರಸ್ತುತ ಸ್ಥಿತಿಗತಿ ನೋಡಿದಾಗ ಸರ್ಕಾರವು ವೈರಾಣುವಿನ ಹೋರಾಟದಲ್ಲಿ ಸಫಲವಾದಂತೆ ಕಾಣುತ್ತದೆ. ಆದರೆ ಈ ರೀತಿಯಲ್ಲಿ ವೈರಸ್ನ ಸ್ಥಿತಿಯ ಬಗ್ಗೆ ಖಂಡಿತವಾಗ ತಿಳಿಯುವುದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಗಮನ ಕೊಡಬೇಕು. ಪ್ರಸ್ತುತ ದೇಶದಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿ ಟೆಸ್ಟಿಂಗ್ಗಳು ನಡೆಯುತ್ತಿವೆ. ಟೆಸ್ಟಿಂಗ್ ಹೆಚ್ಚು ನಡೆಯಬೇಕು. ಸೋಂಕಿತರ ಚಿಕಿತ್ಸೆಗೆ ಸರ್ಕಾರ ಆದ್ಯತೆ ನೀಡಬೇಕು. ರಾಜ್ಯಗಳಿಗೂ ಈ ಕುರಿತಾಗಿ ಸರಿಯಾದ ಮಾರ್ಗದರ್ಶನ ನೀಡಬೇಕು. ಇದು ಕೇಂದ್ರ ಸರ್ಕಾರಕ್ಕೆ ನನ್ನ ಸಲಹೆ ಎಂದು ಹೇಳಿದರು.
ಅಷ್ಟು ಮಾತ್ರವಲ್ಲದೇ ಈ ಲಾಕ್ಡೌನ್ ಸಂದರ್ಭದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕ ಸಮಸ್ಯೆಗಳ ನಿರ್ವಹಣೆಗಾಗಿ ಯೋಜನೆಯೊಂದನ್ನು ರೂಪಿಸಬೇಕು. ಬಡವರಿಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಬೇಕು. ಅದನ್ನು ನೀವು 'ನ್ಯಾಯ್ ಯೋಜನೆ' ಎಂದು ಕರೆಯಬೇಕಾಗಿಲ್ಲ. ಆದರೆ ಬಡವರು ಹಸಿವಿನಿಂದ ಪರಿತಪಿಸದಂತೆ ನೋಡಿಕೊಳ್ಳಿ. ಇದು ನಾನು ಮಾಡುವ ಟೀಕೆ ಎಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಈ ಹಿಂದೆ ಏನಾಗಿದೆ ಎಂಬುದು ಈಗ ಮುಖ್ಯವಲ್ಲ. ಅದರ ವಿಮರ್ಶೆ ಈ ಸಂದರ್ಭದಲ್ಲಿ ಮಾಡುವುದಿಲ್ಲ. ಹಲವು ವಿಚಾರಗಳಲ್ಲಿ ಪ್ರಧಾನಿ ಹಾಗೂ ನನಗೆ ಭಿನ್ನಮತವಿದೆ. ಇದು ಭಿನ್ನಮತದ ಬಗ್ಗೆ ಚರ್ಚೆ ಮಾಡುವ ಸಂದರ್ಭವಲ್ಲ. ನಾವೆಲ್ಲರೂ ಒಟ್ಟಾಗಿ ಕೊರೊನಾದ ವಿರುದ್ಧ ಹೋರಾಡೋಣ. ಸಂಪನ್ಮೂಲಗಳನ್ನು ರಾಜ್ಯ, ಜಿಲ್ಲೆಗೆ ತಲುಪಿಸೋಣ ಎಂದು ಹೇಳಿದ್ದಾರೆ.
ದೇಶದಲ್ಲಿ ಈಗಾಗಲೇ ನಿರುದ್ಯೋಗ ಅಧಿಕವಾಗಿದ್ದು ಈ ಬಿಕ್ಕಟ್ಟಿನಿಂದಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸಮಸ್ಯೆಗಳು ಕಂಡು ಬರುತ್ತದೆ. ಜೀವ ಉಳಿಸಲು ಅರ್ಥ ವ್ಯವಸ್ಥೆಯನ್ನು ಹಾಳು ಮಾಡಲಾಗುವುದಿಲ್ಲ. ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಜೊತೆಗೆ ಸಂವಾದ ನಡೆಸಬೇಕು. ಅವರು ಕಾರ್ಯ ಮಾಡುವ ರೀತಿಯೇ ಬೇರೆಯಾಗಿದೆ ಎಂದು ಹೇಳಿದರು.