ಬೆಂಗಳೂರು, ಏ15 (Daijiworld News/MSP): ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಈ ಬಾರಿ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಹಾಗೂ ವಕ್ಫ್ ಬೋರ್ಡ್ ಹಲವು ಗೈಡ್ಲೈನ್ಸ್ ನೀಡಿದೆ. ಈ ಬಾರಿ ರಂಜಾನ್ ತಿಂಗಳಲ್ಲಿ ಯಾರೂ ಮಸೀದಿಗೆ ಹೋಗಬಾರದು. ಅದಲ್ಲದೆ ಯಾರೂ ಇಫ್ತಿಯಾರ್ ಕೂಟ ಆಯೋಜನೆ ಮಾಡಬಾರದು ಇತ್ಯಾದಿ ಮಾರ್ಗಸೂಚಿಗಳನ್ನು ನೀಡಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಮತ್ತು ಕಾರ್ಯದರ್ಶಿ ಇಬ್ರಾಹಿಂ ಅವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿ, ಏಪ್ರಿಲ್ 25ರಿಂದ ರಂಜಾನ್ ಮಾಸ ಪ್ರಾರಂಭವಾಗುತ್ತದೆ. ಎಲ್ಲರೂ ರಂಜಾನ್ ಆಚರಣೆ ಮಾಡಿ ಸುರಕ್ಷಿತರಾಗಿ ಇರಿ, ಯಾವುದೇ ಕಾರಣಕ್ಕೂ ಸಾಮೂಹಿಕವಾಗಿ ಸೇರಿ ಅನಾಹುತ ಮಾಡುವುದು ಬೇಡ ಎಂದು ಸಂದೇಶ ರವಾನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲ ವಿಚಾರಕ್ಕಿಂತಲೂ ಜೀವ ಮುಖ್ಯ. ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಬಡವರಿಗೆ ಸಹಾಯ ಮಾಡುವ ಹೆಸರಲ್ಲಿ ಗುಂಪು ಸೇರಬಾರದು. ಈ ಬಾರಿ ರಾಜ್ಯದೆಲ್ಲೂ ಇಫ್ತಿಯಾರ್ ಕೂಟ ನಡೆಸುವಂತಿಲ್ಲ, ಬರಿ ಮುಸ್ಲಿಮರಿಗೆ ಅಷ್ಟೇ ಅಲ್ಲ ಇತರ ಸಮುದಾಯಗಳಿಗೂ ಸಹಾಯ ಮಾಡಿ. ಇದು ಅಲ್ಲಾಗೆ ಪ್ರಿಯವಾಗುತ್ತದೆ.
ಯಾವುದೇ ಕಾರಣಕ್ಕೂ ಮಸೀದಿಯಲ್ಲಿ ಗಂಜಿ, ಜ್ಯೂಸ್ ವಿತರಣೆ ಮಾಡುವಂತಿಲ್ಲ, ಮಸೀದಿಯಲ್ಲಿ ಪ್ರವಚನ , ಜುಮ್ಮಾ, ತ್ರಾವಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಮಸೀದಿಯಲ್ಲಿ ನಮಾಜ್ ಮಾಡಲು ಅನುಮತಿ ನೀಡುವಂತಿಲ್ಲ. ಮಸೀದಿಯ ದ್ವನಿವರ್ಧಕ ಕಡಿಮೆ ಶಬ್ದದಲ್ಲಿಡಬೇಕು. ಇದೆಲ್ಲವೂ ಮೇ 3 ವರೆಗೂ ಇದು ಅನ್ವಯವಾಗುತ್ತದೆ. ಸರ್ಕಾರ ಮುಂದಿನ ಕ್ರಮ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಯೂಸುಫ್ ಹೇಳಿದರು.