ನವದೆಹಲಿ, ಎ.17 (DaijiworldNews/PY) : ಕೊರೊನಾ ಪೀಡಿತರ ಚಿಕಿತ್ಸೆಗೆ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕವಾಗಿ ಬಳಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಪ್ಲಾಸ್ಮಾ ಥೆರಪಿಯನ್ನು ಸೋಂಕಿನ ಅಪಾಯ ಅಧಿಕವಿರುವವರ ಚಿಕಿತ್ಸೆಗೆ ಬಳಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲವು ವೈದ್ಯರು ಕಾರ್ಯ ಕೈಗೊಂಡಿದ್ದಾರೆ. ನಾವು ಇದರಲ್ಲಿ ಸಫಲರಾಗಲಿದ್ದೇವೆ ಎಂಬ ಆಶಾಭಾವ ಹೊಂದಿದ್ದೇವೆ ಎಂದು ಗುರುವಾರ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಥೆರಪಿಯು ಕೆಲವು ದೇಶಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಲ್ಲೂ ಪ್ರಯತ್ನಗಳು ನಡೆದಿವೆ. ಆದರೆ, ಲಸಿಕೆ ಕಂಡುಹಿಡಿದರೆ ಮಾತ್ರವೇ ಶಾಶ್ವತವಾಗಿ ಕೊರೊನಾ ವೈರಸ್ ಅನ್ನು ಹೊಡೆದೋಡಿಸಲು ಸಾಧ್ಯ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಬಿಟ್ಟರೆ ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿರುವುದು. ದೆಹಲಿಯಲ್ಲಿ 1,500ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ವರದಿ ಬಂದಿದೆ.