ನವದೆಹಲಿ, ಎ.17 (DaijiworldNews/PY) : ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಪ್ರಾಮುಖ್ಯತೆ ಪಡೆದಿದೆ ಎನ್ನುವ ವಿಚಾರದ ಬಗ್ಗೆ ಪುಟ್ಟ ಮಕ್ಕಳು ನಮಗೆ ದೊಡ್ಡ ಪಾಠ ಕಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಪ್ರಾಮುಖ್ಯತೆ ತಿಳಿಸಿಕೊಡಲು ಮಕ್ಕಳು ಪ್ರಾತ್ಯಕ್ಷಿಕೆ ನೀಡಿರುವ 60 ಸೆಕೆಂಡುಗಳ ವೀಡಿಯೋ ಮಾಡಿದ್ದಾರೆ. ಈ ಆಟದ ಮೂಲಕ ಮಕ್ಕಳು ಕಲಿಸಿಕೊಟ್ಟಿರುವ ಪಾಠ, ಈ ಮಹಾಮಾರಿ ಸೋಂಕಿನಿಂದ ಸಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಂಖಾಂತರ ಸುರಕ್ಷಿತವಾಗಿರಬೇಕು ಎಂಬ ವಿಚಾರವಾಗಿ ಪರಿಣಾಮಕಾರಿಯಾದ ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಮಾಡಿದ ವಿಡಿಯೋದಲ್ಲಿ, ಕೆಂಪು ಇಟ್ಟಿಗೆಗಳನ್ನು ಐವರು ಮಕ್ಕಳು ರಸ್ತೆಯಲ್ಲಿ ಒಂದರ ಮುಂದೆ ಮತ್ತೊಂದರಂತೆ ನಿಲ್ಲಿಸಿ, ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಪರಸ್ಪರ ಒಂದಕ್ಕೊಂದು ತಾಗುತ್ತಾ ಇಟ್ಟಿಗೆಗಳು ಬೀಳುತ್ತಾ ಹೋಗುತ್ತವೆ.
ಎಲ್ಲಾ ಇಟ್ಟಿಗೆಗಳು ಬಿದ್ದ ನಂತರ ಮತ್ತೆ ಅದೇ ಇಟ್ಟಿಗೆಗಳನ್ನು ಮಕ್ಕಳು ಜೋಡಿಸುತ್ತಾ, ಪುನಃ ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಈ ಸಂದರ್ಭ ಒಂದಕ್ಕೊಂದು ತಾಗಿ ಇಟ್ಟಿಗೆಗಳು ಬೀಳುತ್ತಿರುವಾಗ ಬಾಲಕನೊಬ್ಬ ಮಧ್ಯದಲ್ಲಿನ ಇಟ್ಟಿಗೆಯನ್ನು ತೆಗೆಯುತ್ತಾನೆ.
ಮಧ್ಯದ ಇಟ್ಟಿಗೆ ತೆಗೆದ ಬಳಿಕ ಇಟ್ಟಿಗೆಗಳು ಬೀಳುವುದು ನಿಲ್ಲುತ್ತದೆ. ಹೀಗೆ ನಾವು ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಬಹುದು ಎನ್ನುವ ಸಂದೇಶವನ್ನು ಮಕ್ಕಳು ನೀಡಿದ್ದಾರೆ ಎಂದು ಮಕ್ಕಳ ಈ ಕಾರ್ಯವನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.