ರಾಮನಗರ, ಏ 17 (Daijiworld News/MSP): ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವ ಇಂದು ಸರಳವಾಗಿ ನೆರವೇರಲಿದೆ. ನಡೆಯಲಿದೆ. ಆದರೆ ವಿವಾಹವನ್ನು ಅಂದುಕೊಂಡತೆ ವಿಜೃಂಭನೆಯಿಂದ ನೆರವೇರಿಸಲು ಆಗುತ್ತಿಲ್ಲ, ಅಭಿಮಾನಿಗಳನ್ನು ಆಹ್ವಾನಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿಯವರು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸದೆ ಅಭಿಮಾನಿಗಳು, ಬೆಂಬಲಿಗರು ಮನೆಯಿಂದಲೇ ತಮ್ಮ ಮಗನಿಗೆ ಹರಸಬೇಕೆಂದು ವಿಡಿಯೊ ಸಂದೇಶದ ಮೂಲಕ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.
ಮಾಜಿ ಸಚಿವ ಎಂ ಕೃಷ್ಣಪ್ಪ ಅವರ ಮೊಮ್ಮಗಳು ರೇವತಿಯನ್ನು ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರದ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬಗಳ ಸುಮಾರು 50 ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ. ಎರಡೂ ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದ್ದು ಲಾಕ್ ಡೌನ್ ಮುಗಿದು ಕೊರೋನಾ ಸಂಕಷ್ಟ ಬಗೆಹರಿದ ನಂತರ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ.ಈ ಮೊದಲು ರಾಮನಗರದಲ್ಲಿ ಮದುವೆ ಸ್ಥಳ ನಿಗದಿಯಾಗಿದ್ದರೂ ಬಳಿಕ ಬೆಂಗಳೂರಿನ ಮನೆಯಲ್ಲಿ ಮದುವೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಬೆಂಗಳೂರು ಕೋರೋನಾ ಹಾಟ್ ಸ್ಪಾಟ್ ಆಗಿರುವುದರಿಂದ ರಾಮನಗರಕ್ಕೆ ಮದುವೆಯನ್ನು ಸ್ಥಳಾಂತರ ಮಾಡಲಾಗಿದೆ. ಬಿಗಿ ಭದ್ರತೆ ಒದಗಿಸಲಾಗಿದ್ದು ಅನುಮತಿ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಕಳೆದ ರಾತ್ರಿ ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಮನೆಯಲ್ಲಿ ಚಪ್ಪರದ ಪೂಜೆ ಅರಿಶಿನ ಶಾಸ್ತ್ರ ನೆರವೇರಿದ್ದು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮಗನಿಗೆ ಅರಿಶಿನದ ನೀರು ಹಾಕಿ ಶುಭ ಹಾರೈಸಿದ್ದಾರೆ.