ನವದೆಹಲಿ, ಏ 17 (Daijiworld News/MSP): ಕೊರೊನಾ ಹರಡುವಿಕೆಯಿಂದ ಉಂಟಾಗಿರೋ ಆರ್ಥಿಕ ಸಂಕಷ್ಟದ ಹಿನ್ನೆಲೆ ಆರ್ಬಿಐ ಹಲವು ಕ್ರಮಗಳನ್ನ ಕೈಗೊಂಡಿದೆ. ಮಾರಕ ಕೊರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, 2021-22ರಲ್ಲಿ ಆರ್ಥಿಕತೆ ಅತಿ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಟಿ ನಡೆಸಿ, 2020ರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, 2021ರಲ್ಲಿ 7.4 ಜಿಡಿಪಿ ಅಭಿವೃದ್ಧಿ ದರ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಕುಸಿತ ಕಂಡಿರುವ ಕಂಪನಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೆರವು ನೀಡಲಿದೆ. ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ನೆರವು ನೀಡಲಾಗುವುದು. ಗ್ರಾಮೀಣ ಮತ್ತು ಸಹಕಾರ ಬ್ಯಾಂಕುಗಳಿಗೆ ನೆರವು ನೀಡಲಿದೆ. ಉದ್ಯಮ ವಲಯಕ್ಕೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಕಂಪನಿಗಳ ಸಾಲ ಪಾವತಿಗೆ 90 ದಿನ ವಿನಾಯಿತಿ ನೀಡಲಾಗಿದ್ದು, ಕುಸಿತ ಕಂಡ ಕಂಪನಿಗಳಿಗೆ ನೆರವು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಲ ನೀತಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಭಾರತದಲ್ಲಿ ಅಗತ್ಯ ಪ್ರಮಾಣದ ದಿನಸಿ ದಾಸ್ತಾನಿದೆ. ಬ್ಯಾಂಕ್ ಗಳಿಗೆ ಹೊಸ ಕರೆನ್ಸಿ ಬಿಡುಗಡೆ ಮಾಡಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಪರಿಸ್ಥಿತಿ ನಿಭಾಯಿಸಲಾಗಿದೆ. ಹಣದ ಹರಿವು ಕಾಪಾಡಿದ್ದೇವೆ. ಯಾವುದೇ ಬ್ಯಾಂಕ್ ಗಳಲ್ಲೂ ಹಣದ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.