ನವದೆಹಲಿ, ಎ.17 (DaijiworldNews/PY) : ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕವೂ ಪುನಃ ಕೊರೊನಾ ವ್ಯಾಪಿಸದಂತೆ ನಿಯಂತ್ರಣ ವಹಿಸುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಹಾಗೂ ಆರೋಗ್ಯ ಸಚಿವಾಲಯವು ಪೋಲಿಯೊ ಪ್ರಕರಣಗಳ ಕಣ್ಗಾವಲು ಕಾರ್ಯಕ್ರಮದ ಸಿಬ್ಬಂದಿಯ ಸೇವೆಯನ್ನು ಉಪಯೋಗಿಸಿಕೊಳ್ಳಲು ಸಿದ್ದವಾಗಿದೆ.
ಮುಂದಿನ ಹಲವು ತಿಂಗಳುಗಳ ಕಾಲ ಕೊರೊನಾ ಮತ್ತೆ ವ್ಯಾಪಿಸದಂತೆ ನಿಗಾವಹಿಸುವ ಕೆಲಸ ನಡೆಯುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೋ ನಿರ್ಮೂಲನಾ ಕಾರ್ಯಕ್ರಮಕ್ಕಾಗಿ ತರಬೇತಿ ನೀಡಿರುವ 1,600 ಸಿಬ್ಬಂದಿಗಳು ಇನ್ನು ಮುಂದೆ ಕೊರೊನಾ ವೈರಸ್ ಸೋಕು ವ್ಯಾಪಿಸದಂತೆ ನಿಯಂತ್ರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಗುರುವಾರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
ಈ ಬಗ್ಗೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಈ ತಂಡದಲ್ಲಿ 1,252 ಕ್ಷೇತ್ರ ನಿರ್ವಹಣಾ ಸಿಬ್ಬಂದಿ, ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ 106 ಸಿಬ್ಬಂದಿ, ಪೋಲಿಯೊ ನಿರ್ಮೂಲನಾ ಕಾರ್ಯಕ್ರಮದ 227 ವೈದ್ಯರು,ಇತರೆ ರೋಗಗಳ ನಿಯಂತ್ರಣ ಕಾರ್ಯಕ್ರಮದ 27 ಹಾಗೂ ರಕ್ತದೊತ್ತಡಕ್ಕೆ ಸಂಬಂಧಿಸಿದ ಯೋಜನೆಯ 26 ಸಿಬ್ಬಂದಿಗಳಿದ್ದಾರೆ ಎಂದು ಲವ್ ಅಗರ್ವಾಲ್ ಅವರು ತಿಳಿಸಿದ್ದಾರೆ.